ಶಿಕಾರಿಪುರ: ಪಟ್ಟಣದ ಸೊಸೈಟಿ ಕೇರಿ ನಿವಾಸಿ ಜಿ ಕೇಶವ್ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625ಕ್ಕೆ 622 ಅಂಕಗಳನ್ನು ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ವೃತ್ತಿಯಲ್ಲಿ ಗಾರೆ ಕೆಲಸ ಮಾಡಿಕೊಂಡಿರುವ ಗಣೇಶ್ ಹಾಗೂ ಗಾರ್ಮೆಂಟ್ ಕೆಲಸಕ್ಕೆ ತೆರಳುವ ಸುಮಾ ಎಂಬುವರ ಪ್ರಥಮ ಪುತ್ರನಾದ ಕೇಶವ್ ಚಿಕ್ಕಂದಿನಿಂದಲೇ ಓದಿನಲ್ಲಿ ನಿಪುಣನಾಗಿದ್ದು, 5ನೇ ತರಗತಿಯಲ್ಲಿ ನವೋದಯ ಪರೀಕ್ಷೆ ಬರೆದು ನಂತರ ತಾಲೂಕಿನ ಚುರ್ಚಿ ಗುಂಡಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 6ನೇ ತರಗತಿಯಿಂದ ವ್ಯಾಸಂಗ ಮಾಡಿ ಇಂದು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
” ಶಿಕ್ಷಣದ ಪರಿಶ್ರಮ “
ದಿನನಿತ್ಯ ಮುಂಜಾನೆ 5.00 ಗಂಟೆಗೆ ಎದ್ದು ಬೆಳಗಿನ ಕಾರ್ಯ ಚಟುವಟಿಕೆಗಳನ್ನು ಮುಗಿಸಿ ರಜಾ ಸಮಯ ಸೇರಿದಂತೆ ಪ್ರತಿನಿತ್ಯ 8 ಗಂಟೆ ಓದುವ ಅಭ್ಯಾಸ ಮಾಡಿಕೊಂಡಿರುವ ಕೇಶವ್ ಐದು ವರ್ಷಗಳಿಂದ ಮೊಬೈಲ್ ಬಳಕೆಯಿಂದ ದೂರವಿದ್ದು, ಪ್ರತಿ ಭಾನುವಾರದಂದು ವಸತಿ ಶಾಲೆಯ ದೂರವಾಣಿ ಮೂಲಕ ಪೋಷಕರ ಜೊತೆ ಮಾತನಾಡುವುದು ಬಿಟ್ಟರೆ ಯಾವುದೇ ಟ್ಯೂಷನ್ ಗೆ ಹೋಗದೆ ಪ್ರಾಪಂಚಿಕ ಜ್ಞಾನಕ್ಕೆ ಸಂಬಂಧಿಸಿದಂತೆ ಪ್ರತಿನಿತ್ಯ ದಿನಪತ್ರಿಕೆಗಳನ್ನು ಓದುವ ಅಭ್ಯಾಸ ಇಟ್ಟುಕೊಂಡಿರುವುದು ದಿನಚರಿಣೆಯಾಗಿದೆ.
“ಸ್ಪೂರ್ತಿ ಮತ್ತು ಹವ್ಯಾಸ”
ವಸತಿ ಶಾಲೆಯ ಪ್ರಿನ್ಸಿಪಾಲ್ ಬಿ.ಎಸ್ ಸುಮಾ ಹಾಗೂ ಶಿಕ್ಷಕರು ಈತನ ಶೈಕ್ಷಣಿಕ ಏಳಿಗೆ ಅರಿತು ಪ್ರತಿನಿತ್ಯ ಓದಿಗೆ ಸಹಕಾರ ನೀಡುತ್ತಿದ್ದರು. ಇದರ ಜೊತೆಗೆ ಡ್ರಾಯಿಂಗ್ ಮತ್ತು ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದ ಕೇಶವ್ ಕೇಂದ್ರ ಸರ್ಕಾರದ ನೀತಿ ಆಯೋಗದ ಕುರಿತು ಮತ್ತು ಇತರೆ ಪ್ರಾಜೆಕ್ಟ್ ರಿಪೋರ್ಟ್ ಗಳನ್ನು ಮಾಡಿ ಗಮನ ಸೆಳೆದಿದ್ದಾರೆ.
ನನ್ನ ಮಗ ನಾನು ಅಂದುಕೊಂಡಿದ್ದಕ್ಕಿಂತ ಹೆಚ್ಚಿನದಾಗಿ ಸಾಧಿಸಿದ್ದಾನೆ. ಇನ್ನೊಬ್ಬ ಮಗ ಸರ್ಕಾರಿ ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿದ್ದು, ಇಬ್ಬರಿಗೂ ಉನ್ನತ ಶಿಕ್ಷಣ ಕೊಡಿಸಿ ಸರ್ಕಾರಿ ನೌಕರಿಗೆ ಸೇರಿಸಬೇಕು ಎನ್ನುವ ಗುರಿ ಇದೆ.
-ಗಣೇಶ್, ವಿದ್ಯಾರ್ಥಿ ಕೇಶವ್ ತಂದೆ.ನಮ್ಮ ಮನೆಯ ಪರಿಸ್ಥಿತಿಯನ್ನು ಅರಿತು ನಾನು ಶಿಕ್ಷಣದ ಕಡೆ ಗಮನ ಕೊಟ್ಟೆ ಇದರ ಪರಿಣಾಮ ಇಂದು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿರುವುದು ನನಗೆ ಹೆಮ್ಮೆ ಅನಿಸುತ್ತದೆ. ಇದಕ್ಕಾಗಿ ನಾನು ನನ್ನ ಶಿಕ್ಷಕರು ಮತ್ತು ಆಡಳಿತ ಮಂಡಳಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಮುಂದಿನ ದಿನಗಳಲ್ಲಿ ಐ ಎ ಎಸ್ ಮಾಡುವ ಆಶೆ ಇದೆ. ಇದೇ ರೀತಿ ವಿದ್ಯಾರ್ಥಿಗಳು ಸೋಶಿಯಲ್ ಮೀಡಿಯಾ ಕಡೆ ಗಮನ ಹರಿಸುವುದನ್ನು ಬಿಟ್ಟು ತಂದೆ ತಾಯಿ ಶ್ರಮದ ಬಗ್ಗೆ ಅರಿವು ಅರಿತು ಉತ್ತಮ ಶಿಕ್ಷಣ ಪಡೆಯಬೇಕೆಂಬುದು ನನ್ನ ಅಭಿಪ್ರಾಯ.
-ಜಿ ಕೇಶವ್ ಎಸ್. ಎಸ್. ಎಲ್. ಸಿ ಟಾಪರ್ ಶಿಕಾರಿಪುರ.















