ಶಿವಮೊಗ್ಗ : ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ, ಗುದ್ದಲಿಯಿಂದ ಹೊಡೆದು ಕೊಲೆ ಮಾಡಿ, ಮೃತದೇಹವನ್ನು ಬಾವಿಗೆ ಎಸೆದಿದ್ದ ಆರೋಪಿಗೆ ಶಿವಮೊಗ್ಗದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ 10,000 ದಂಡ ವಿಧಿಸಿ ತೀರ್ಪು ನೀಡಿದೆ.
ಇದನ್ನೂ ಓದಿ > ಶಿವಮೊಗ್ಗ ಗ್ರಾಮಾಂತರ ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರ ಶ್ಲಾಘನೆ
ತೀರ್ಥಹಳ್ಳಿ ತಾಲೂಕಿನ ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯ ಬಿದರಗೋಡು ಗ್ರಾಮದ ನಿವಾಸಿ ರಾಜಪ್ಪ (36) ಶಿಕ್ಷೆಗೊಳಗಾದ ಆರೋಪಿ. 2022ರ ಡಿಸೆಂಬರ್ 18ರಂದು ಅದೇ ಗ್ರಾಮದ ಪಾರ್ವತಮ್ಮ (50) ಎಂಬುವವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದ. ಈ ವೇಳೆ ಮಹಿಳೆಯು ತನ್ನ ಮರ್ಯಾದೆ ತೆಗೆಯುತ್ತಾಳೆಂಬ ಭೀತಿಯಿಂದ ರಾಜಪ್ಪ ಗುದ್ದಲಿಯಿಂದ ಹೊಡೆದು ಆಕೆಯ ಕೊಲೆ ಮಾಡಿದ್ದ. ಮೃತದೇಹವನ್ನು ಬಾವಿಗೆ ಹಾಕಿದ್ದ.
ಇದನ್ನೂ ಓದಿ > ರಭಸವಾಗಿ ಹರಿಯುತ್ತಿರುವ ನದಿಯಲ್ಲಿ ಮೆಸ್ಕಾಂ ಸಿಬ್ಬಂದಿ ಕೆಲಸ!
ಘಟನೆ ಸಂಬಂಧ ಆಗುಂಬೆ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಮಾಳೂರು ವೃತ್ತದ ಇನ್ಸ್‌ಪೆಕ್ಟರ್ ಪ್ರವೀಣ್ ನೀಲಮ್ಮನವರ್ ಅವರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು. ಸಾಕ್ಷ್ಯಾಧಾರ ದೃಢಪಟ್ಟ ಹಿನ್ನೆಲೆ, ನ್ಯಾಯಾಧೀಶರಾದ ಯಶವಂತ ಕುಮಾರ್ ಅವರು ಆರೋಪಿಗೆ ಜೀವಾವಧಿ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ. ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಶಾಂತರಾಜ್ ಅವರು ವಾದ ಮಂಡಿಸಿದ್ದರು.















