ಸಾಗರ: ತಾಲೂಕಿನ ಕಲ್ಗಲ್ ಹಲಕೊಟ್ಟಿಗೆ ಕ್ರಾಸ್ ಬಳಿ ಗಾರ್ಮೆಂಟ್ಸ್ ನೌಕರರಿದ್ದ ಖಾಸಗಿ ಪ್ರವಾಸಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಹಲವು ಪ್ರಯಾಣಿಕರು ಗಾಯಗೊಂಡಿರುವ ಘಟನೆ ನಡೆದಿದೆ.
ದಾವಣಗೆರೆಯ ಖಾಸಗಿ ಗಾರ್ಮೆಂಟ್ಸ್ ಒಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ವಾರಾಂತ್ಯದ ಹಿನ್ನೆಲೆಯಲ್ಲಿ ಪ್ರವಾಸ ಹಮ್ಮಿಕೊಂಡಿದ್ದರು. ಕೊಲ್ಲೂರು ಮೂಕಾಂಬಿಕಾ ದೇವಿಯ ದರ್ಶನ ಮುಗಿಸಿಕೊಂಡು, ಶರಾವತಿ ಹಿನ್ನೀರಿನ ಸಿಗಂದೂರು ಚೌಡೇಶ್ವರಿ ದೇವಾಲಯದ ಕಡೆಗೆ ತೆರಳುತ್ತಿದ್ದ ಮಾರ್ಗಮಧ್ಯೆ ಈ ಘಟನೆ ನಡೆದಿದೆ.
ಇದನ್ನೂ ಓದಿ > > ಶಿವಮೊಗ್ಗ, ಸೂಡಾ ನೂತನ ಅಧ್ಯಕ್ಷರಾಗಿ ಮಧುಸೂದನ್ ನೇಮಕ
ಕಲ್ಗಲ್ ಹಲಕೊಟ್ಟಿಗೆ ಕ್ರಾಸ್ನ ಕಡಿದಾದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಬಸ್ ರಸ್ತೆ ಬದಿಗೆ ಉರುಳಿ, ಸಮೀಪದ ಮನೆಯ ಮೇಲೆ ಬಿದ್ದಿದೆ.
ಬಸ್ ಪಲ್ಟಿಯಾಗುತ್ತಿದ್ದಂತೆ ತಕ್ಷಣವೇ ಕಾರ್ಯಪ್ರವೃತ್ತರಾದ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಇತರ ವಾಹನ ಸವಾರರು ಸ್ಥಳಕ್ಕೆ ಧಾವಿಸಿ, ಬಸ್ನ ಕಿಟಕಿ ಗಾಜುಗಳನ್ನು ಒಡೆದು ಒಳಗೆ ಸಿಲುಕಿಕೊಂಡಿದ್ದ ನೌಕರರನ್ನು ಹೊರತೆಗೆಯಲು ನೆರವಾದರು. ಘಟನೆಯಲ್ಲಿ ಮೂರರಿಂದ ನಾಲ್ಕು ಮಂದಿಗೆ ಗಂಭೀರ ಸ್ವರೂಪದ ಪೆಟ್ಟಾಗಿದ್ದು, ಉಳಿದ ಹಲವು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ಗಾಯಾಳುಗಳನ್ನು ಪ್ರಾಥಮಿಕವಾಗಿ ಸಮೀಪದ ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಿ ಚಿಕಿತ್ಸೆ ನೀಡಲಾಯಿತು.
ಇದನ್ನೂ ಓದಿ > > ಜೆ.ಎನ್.ಎನ್.ಸಿ ಕಾಲೇಜಿನಲ್ಲಿ ನಾಸಾ ಸ್ಪೇಸ್ ಚಾಲೆಂಜ್ ನೊಂದಣಿಗೆ ಆಹ್ವಾನ
ವಿಷಯ ತಿಳಿಯುತ್ತಿದ್ದಂತೆಯೇ ಕಾರ್ಗಲ್ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಪರಿಶೀಲನೆ ನಡೆಸಿದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.














