ಶಿವಮೊಗ್ಗ : ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಆನವೇರಿ ಗ್ರಾಮದಲ್ಲಿ ತಡರಾತ್ರಿ ಕುರಿ ಕಾಳಗದ ಜೂಜಾಟದ ವೇಳೆ ನಡೆದ ಗಲಾಟೆಯಲ್ಲಿ ಯುವಕನೊಬ್ಬನಿಗೆ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿರುವ ಘಟನೆ ನಡೆದಿದೆ.
ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಾಟ್ಸಪ್ ಗ್ರೂಪ್ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ
ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ವಿಕೋಪಕ್ಕೆ ತಿರುಗಿ ಕೆಲ ಯುವಕರು ಸುನಿಲ್ ಎಂಬ ಯುವಕನ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾರೆ. ಚಾಕು ಇರಿತಕ್ಕೊಳಗಾಗಿ ಗಂಭೀರ ಗಾಯಗೊಂಡಿರುವ ಸುನಿಲ್ ಅವರನ್ನು ತಕ್ಷಣವೇ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಈ ಘಟನೆಯು ತಡರಾತ್ರಿ ಸುಮಾರು 1 ಗಂಟೆಯ ಸುಮಾರಿಗೆ ಕುರಿ ಕಾಳಗ ಹಾಗೂ ಜೂಜಾಟ ನಡೆಯುತ್ತಿದ್ದ ವೇಳೆ ಸಂಭವಿಸಿದೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಹೊಳೆಹೊನ್ನೂರು ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ > > ಅಪಘಾತದಲ್ಲಿ ಗಾಯಗೊಂಡಿದ್ದ ಪೊಲೀಸ್ ಕಾನ್ಸ್ಟೇಬಲ್ ಸಾವು!
ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಶಂಕಿತ ಯುವಕರನ್ನು ಪೊಲೀಸರು ಬಂಧಿಸಿದ್ದು, ಗಲಾಟೆಗೆ ನಿಖರವಾದ ಕಾರಣವೇನು ಎಂಬುದನ್ನು ತಿಳಿಯಲು ಬಂಧಿತರನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆಯನ್ನು ಚುರುಕುಗೊಳಿಸಿದ್ದಾರೆ.













