ಬೆಂಗಳೂರು: ಒಂದು ವರ್ಷದ ಅವಧಿಗೆ ತಂಬಾಕು ಅಥವಾ ನಿಕೋಟಿನ್ ಹೊಂದಿರುವ ಗುಟ್ಕಾ ಹಾಗೂ ಪಾನ್ ಮಸಾಲಾ ಉತ್ಪನ್ನಗಳ ತಯಾರಿಕೆ, ಸಂಗ್ರಹ, ವಿತರಣೆ, ಸಾಗಣೆ ಮತ್ತು ಮಾರಾಟವನ್ನು ಕರ್ನಾಟಕದಲ್ಲಿ ನಿಷೇಧಿಸಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಆಯುಕ್ತರು ಇಂದು (ಆ.12) ಆದೇಶ ಹೊರಡಿಸಿದ್ದಾರೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ಸೆಕ್ಷನ್ 30(2)(a) ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ (ಮಾರಾಟ ನಿಷೇಧ ಮತ್ತು ನಿರ್ಬಂಧ) ನಿಯಮಾವಳಿ-2011ರ ನಿಯಮ 2.3.4ರ ಅಡಿಯಲ್ಲಿ ಈ ಆದೇಶ ಹೊರಡಿಸಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಿಗೂ ನಿಷೇಧ ಅನ್ವಯವಾಗಲಿದೆ.
ಯಾವೆಲ್ಲ ಉತ್ಪನ್ನಗಳಿಗೆ ನಿಷೇಧ?
ತಂಬಾಕು/ನಿಕೋಟಿನ್ ಹೊಂದಿರುವ ಗುಟ್ಕಾ, ಪಾನ್ ಮಸಾಲಾ ಸೇರಿದಂತೆ ಅಂತಿಮ ಉತ್ಪನ್ನದಲ್ಲಿ ತಂಬಾಕು ಅಥವಾ ನಿಕೋಟಿನ್ ಹೊಂದಿರುವ ಯಾವುದೇ ಉತ್ಪನ್ನಗಳಿಗೆ ನಿಷೇಧ ಅನ್ವಯವಾಗಲಿದೆ. ಉತ್ಪನ್ನ ಪ್ಯಾಕ್ ಮಾಡಿರಲಿ ಅಥವಾ ಬಿಡಿಯಾಗಿ ಮಾರಾಟವಾಗಲಿ, ನಿಷೇಧದಿಂದ ವಿನಾಯಿತಿ ಇರುವುದಿಲ್ಲ.
ಇದನ್ನೂ ಓದಿ > > ಶಾಲೆಯಲ್ಲಿ ಕುಸಿದು ಬಿದ್ದು ವಿದ್ಯಾರ್ಥಿ ಸಾವು!, ಪೋಷಕರ ಆಕ್ರಂದನ
ಒಂದೇ ಪ್ಯಾಕೆಟ್‌ನಲ್ಲಿ ಗುಟ್ಕಾ ಅಥವಾ ಪಾನ್ ಮಸಾಲಾ ಮಾರಾಟ ಮಾಡುವುದರ ಜತೆಗೆ, ತಂಬಾಕು ಮತ್ತು ನಿಕೋಟಿನ್ ಪ್ರತ್ಯೇಕ ಪ್ಯಾಕೆಟ್‌ಗಳಲ್ಲಿ ತುಂಬಿ, ಗ್ರಾಹಕರು ಸುಲಭವಾಗಿ ಮಿಶ್ರಣ ಮಾಡಿಕೊಂಡು ಸೇವಿಸುವ ರೀತಿಯಲ್ಲಿ ಮಾರಾಟ ಅಥವಾ ವಿತರಿಸುವುದಕ್ಕೂ ನಿಷೇಧ ಅನ್ವಯವಾಗಲಿದೆ.
ಸಾಚೆಟ್, ಪೌಚ್, ಪ್ಲಾಸ್ಟಿಕ್ ಪ್ಯಾಕೆಟ್ ಅಥವಾ ಇತರ ಯಾವುದೇ ರೀತಿಯ ಪ್ಯಾಕಿಂಗ್‌ನಲ್ಲಿ ಮಾರಾಟವಾಗುವ ಉತ್ಪನ್ನಗಳಿಗೂ ಆದೇಶ ಅನ್ವಯಿಸುತ್ತದೆ.
ಇದನ್ನೂ ಓದಿ > > ಆಗುಂಬೆ ಪೊಲೀಸ್ ಠಾಣೆಯ ಹೆಡ್‌ಕಾನ್ಸ್‌ಟೇಬಲ್ ಡಿ.ಶಿವಣ್ಣ ನಿಧನ
ತಯಾರಿಕೆ, ಸಾಗಣೆಗೂ ಬ್ರೇಕ್
ನಿಷೇಧಿತ ಉತ್ಪನ್ನಗಳ ತಯಾರಿಕಾ ಘಟಕಗಳು, ಶೀತಲ ಸಂಗ್ರಹಾಗಾರಗಳು, ಸಗಟು ವಿತರಣಾ ಕೇಂದ್ರಗಳು, ಜಿಲ್ಲೆಗಳ ನಡುವೆ ಸಾಗಣೆ ಹಾಗೂ ಚಿಲ್ಲರೆ ಮಾರಾಟ ಮಳಿಗೆಗಳ ಮೇಲೂ ಅಧಿಕಾರಿಗಳು ನಿಗಾ ಇರಿಸಲಿದ್ದಾರೆ.
ಆಹಾರ ಸುರಕ್ಷತಾ ಅಧಿಕಾರಿಗಳು ಹಾಗೂ ಸ್ಥಳೀಯ ಪೊಲೀಸರು ಸಗಟು ಮಾರುಕಟ್ಟೆ, ಗೋದಾಮುಗಳು ಮತ್ತು ಅಂತಾರಾಜ್ಯ ಗಡಿಗಳಲ್ಲಿ ದಿಢೀರ್ ತಪಾಸಣೆ ನಡೆಸಲು ಅಧಿಕಾರ ಹೊಂದಿರುತ್ತಾರೆ.
ಇದನ್ನೂ ಓದಿ > > ಶಿವಮೊಗ್ಗ ಜಿಲ್ಲೆ ಬಂದ್ ಅನಿವಾರ್ಯ, ಕಲ್ಲೂರು ಮೇಘರಾಜ್
ಪಾನ್ ಮಸಾಲಾ ಪ್ಯಾಕಿಂಗ್‌ಗೂ ಹೊಸ ನಿಯಮ
ಇದೇ ವೇಳೆ, ದೇಶಾದ್ಯಂತ ಪಾನ್ ಮಸಾಲಾ ಉತ್ಪನ್ನಗಳ ಪ್ಯಾಕೇಜಿಂಗ್ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸುವ ಕ್ರಮಗಳನ್ನೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಕೈಗೊಂಡಿದೆ. 2026ರ ಪ್ಯಾಕೇಜಿಂಗ್ ತಿದ್ದುಪಡಿ ನಿಯಮಗಳ ಪ್ರಕಾರ ಪ್ಲಾಸ್ಟಿಕ್ ಮತ್ತು ಲೋಹದ ಲ್ಯಾಮಿನೇಟೆಡ್ ಪ್ಯಾಕೇಜಿಂಗ್ ಬಳಕೆಗೆ ನಿರ್ಬಂಧ ವಿಧಿಸಲಾಗಿದೆ. ಪರಿಸರ ಸ್ನೇಹಿ ಸೆಲ್ಯುಲೋಸ್, ಪೇಪರ್‌ಬೋರ್ಡ್ ಹಾಗೂ ನೈಸರ್ಗಿಕ ರಿಜಿಡ್ ಕಂಟೇನರ್‌ಗಳಂತಹ ಪರ್ಯಾಯ ವಸ್ತುಗಳ ಬಳಕೆಗೆ ಆದ್ಯತೆ ನೀಡಲಾಗಿದೆ.
ಇದನ್ನೂ ಓದಿ > > ಟ್ರಾಫಿಕ್ ಪೊಲೀಸರ ಖಡಕ್ ಕಾರ್ಯಾಚರಣೆ, ಹಣ್ಣಿನ ಅಂಗಡಿಗಳ ತೆರವು!














