ಶಿವಮೊಗ್ಗ: ಕೊಣಂದೂರಿನ ರಾಷ್ಟ್ರೀಯ ವಸತಿ ಶಾಲೆಯಲ್ಲಿ ಮಲೆನಾಡು ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ಪ್ರಾಂಶುಪಾಲ ಕೆ.ಎಸ್. ವಾಸುದೇವ ಅವರು, ಮಲೆನಾಡು ನಾಡಿಗೆ ಅನೇಕ ಶ್ರೇಷ್ಠ ವ್ಯಕ್ತಿಗಳನ್ನು ನೀಡಿದೆ. ನಮ್ಮ ಶಾಲೆ ಮಲೆನಾಡಿನಲ್ಲಿದ್ದರೂ ರಾಜ್ಯದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಮಲೆನಾಡಿನ ಸಂಸ್ಕೃತಿ ಹಾಗೂ ಸವಿರುಚಿಗಳನ್ನು ಅನುಭವಿಸುತ್ತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ > ಶಿವಮೊಗ್ಗ ಗ್ರಾಮಾಂತರ ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರ ಶ್ಲಾಘನೆ
ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಒಂದು ದಿನ ಮಲೆನಾಡಿನ ಸಣ್ಣ ಹಳ್ಳಿಗೆ ಭೇಟಿ ನೀಡಿ ಅಲ್ಲಿನ ಜನರ ಜೀವನಶೈಲಿ, ಸಂಸ್ಕೃತಿ ಹಾಗೂ ಪರಿಸರವನ್ನು ಅವಲೋಕಿಸಬೇಕು ಎಂದು ಕರೆ ನೀಡಿದರು.
ಇದನ್ನೂ ಓದಿ > ಶಿವಮೊಗ್ಗ, ವಿದ್ಯುತ್ ಕಂಬಕ್ಕೆ ಎಟಿಎಂ ಹಣ ಸಾಗಣೆ ವಾಹನ ಡಿಕ್ಕಿ!
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪ್ರೊಫೆಸರ್ ವೆಂಕಟಗಿರಿ ಎಚ್.ಪಿ. ಮಾತನಾಡಿ, ಮಲೆನಾಡಿನಲ್ಲಿ ಹುಟ್ಟಿರುವ ನಾನು ಪುಣ್ಯವಂತ. ಕೃಷಿಕನಾಗಿರುವ ನನಗೆ ಈ ಹಬ್ಬದಲ್ಲಿ ಭಾಗವಹಿಸುವ ಮೂಲಕ ಬಾಲ್ಯದ ನೆನಪುಗಳು ಮರುಕಳಿಸಿದವು. ಮಲೆನಾಡಿನ ಹಂಚಿನ ಮನೆಗಳು, ನಿರಂತರ ಸುರಿಯುವ ಮಳೆ ಹಾಗೂ ಪ್ರಕೃತಿಯ ಸೊಬಗು ಮನಸ್ಸನ್ನು ಮತ್ತೆ ಬಾಲ್ಯದ ದಿನಗಳಿಗೆ ಕರೆದೊಯ್ದಿತು ಎಂದು ಹೇಳಿದರು.
ಇದನ್ನೂ ಓದಿ > ತೆಂಗಿನಕಾಯಿ ಕೀಳುವಾಗ ವಿದ್ಯುತ್ ಸ್ಪರ್ಶಿಸಿ ರೈತ ಸಾವು
ಪಿಯು ವಿಭಾಗದ ಮುಖ್ಯಸ್ಥ ಬಿ.ಕೆ. ಪ್ರಫುಲ್ಲ ಅವರು, ಮಕ್ಕಳನ್ನು ಯಾವುದೇ ಒತ್ತಡವಿಲ್ಲದೆ ಸಹಜವಾಗಿ ಬೆಳೆಯಲು ಪಾಲಕರು ಅವಕಾಶ ನೀಡಬೇಕು. ಹಿಂದೆ ನಾವು ಓದು ಮತ್ತು ಪೋಷಕರ ಒತ್ತಡವಿಲ್ಲದೆ ಬೆಳೆದಿದ್ದೆವು. ಇಂದು ಮಲೆನಾಡು ಕೂಡ ಅಂದಿನ ಮಲೆನಾಡಾಗಿ ಉಳಿದಿಲ್ಲ ನವೀನತೆಯತ್ತ ಸಾಗುತ್ತಿದೆ. ಹಿಂದಿನ ಮಲೆನಾಡಿನ ಸರಳ ಜೀವನ, ಬಡತನ ಹಾಗೂ ಕಷ್ಟಗಳ ನಡುವೆಯೂ ಸಂತೋಷದಿಂದ ಬದುಕಿದ ದಿನಗಳು ಮರೆಯಲಾಗದ ನೆನಪುಗಳಾಗಿವೆ ಎಂದು ತಮ್ಮ ಬಾಲ್ಯದ ಅನುಭವಗಳನ್ನು ಹಂಚಿಕೊಂಡರು.
ವಿಭಾಗದ ಮುಖ್ಯಸ್ಥೆ ಸುಜಾತಾ ರಮೇಶ್ ಮಾತನಾಡಿ, ರಾಷ್ಟ್ರಕವಿ ಕುವೆಂಪು ಅವರ ಜನ್ಮಸ್ಥಳವಾದ ಮಲೆನಾಡಿನ ಪ್ರಕೃತಿ ಸೌಂದರ್ಯವೇ ಅವರನ್ನು ಮಹಾನ್ ಕವಿಯನ್ನಾಗಿ ರೂಪಿಸಿತು. ಶಾಲೆಯಲ್ಲಿರುವ ಕುವೆಂಪು ಹಾಗೂ ಪೂರ್ಣಚಂದ್ರ ತೇಜಸ್ವಿ ಅವರ ಕೃತಿಗಳನ್ನು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಓದಿ ಅರ್ಥೈಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಜೊತೆಗೆ ಮಲೆನಾಡು ಹಬ್ಬದ ಯಶಸ್ಸಿಗೆ ಸಹಕರಿಸಿದ ಎಲ್ಲ ಪೋಷಕರಿಗೂ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕಿ ಪಲ್ಲವಿ ಎಚ್.ಆರ್. ಸ್ವಾಗತಿಸಿದರು. ಸಂಗೀತ ಪಿ. ವಂದಿಸಿದರು. ಈ ಸಂದರ್ಭದಲ್ಲಿ ಶಿಕ್ಷಕರು ಏರ್ಪಡಿಸಿದ್ದ ಮಲೆನಾಡು ಹಬ್ಬದ ವಿಶೇಷ ವಸ್ತು ಪ್ರದರ್ಶನವನ್ನು ವಿದ್ಯಾರ್ಥಿಗಳು ವೀಕ್ಷಿಸಿದರು.















