ಶಿವಮೊಗ್ಗ: ಎನ್ಎಸ್ಎಸ್ ವಿದ್ಯಾರ್ಥಿಗಳು, ಇಲ್ಲಿ ಕಲಿತ ಅನುಭವದ ಮೂಲಕ ಸ್ಫೂರ್ತಿದಾಯಕ ವ್ಯಕ್ತಿಗಳಾಗಿ ಸಮಾಜದಲ್ಲಿ ರೂಪಗೊಳ್ಳಿ ಎಂದು ಸಿಬಿಆರ್ ಕಾನೂನು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಕಾಂತರಾಜ್ ಹೇಳಿದರು.
ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ–1, ಘಟಕ–2 ಹಾಗೂ ಘಟಕ–3ರ ಸಹಯೋಗದಲ್ಲಿ ಗುರುವಾರ ಏರ್ಪಡಿಸಿದ್ದ2026 ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನಾ ದಿನಾಚರಣೆಯನ್ನು ಎನ್ಎಸ್ಎಸ್ ಧ್ವಜಾರೋಹಣಗೊಳಿಸಿ ಮಾತನಾಡಿದರು.
ಸೇವೆಯೆಂದರೆ ಪ್ರತಿಫಲವನ್ನು ನಿರೀಕ್ಷಿಸುವ ಕಾರ್ಯವಲ್ಲ. ನಿಸ್ವಾರ್ಥ ಸೇವೆಯ ಮೂಲಕ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುವುದೇ ನಿಜವಾದ ಸೇವೆಯಾಗಿದೆ. ವಿದ್ಯಾರ್ಥಿ ಜೀವನದಲ್ಲಿಯೇ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರೆ, ಮುಂದೆ ಜವಾಬ್ದಾರಿಯುತ ನಾಗರಿಕರಾಗಿ ದೇಶದ ಅಭಿವೃದ್ಧಿಗೆ ಉತ್ತಮ ಕೊಡುಗೆ ನೀಡಲು ಸಾಧ್ಯವಾಗುತ್ತದೆ ಎಂದರು.
ರಾಷ್ಟ್ರೀಯ ಸೇವಾ ಯೋಜನೆಯ ಧ್ಯೇಯ ಮತ್ತು ಉದ್ದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ‘ನನಗಲ್ಲ, ನಿನಗೆ’ ಎಂಬ ಸೇವಾ ಮನೋಭಾವದೊಂದಿಗೆ ಕಾರ್ಯನಿರ್ವಹಿಸಬೇಕು. ದೇಶದ ಅಭಿವೃದ್ಧಿಯಲ್ಲಿ ಯುವಜನರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಎನ್ಎಸ್ಎಸ್ ಸ್ವಯಂಸೇವಕರು ದೇಶಸೇವೆಯ ಮನೋಭಾವ ಬೆಳೆಸಿಕೊಂಡಾಗ ಅವರ ಜೀವನ ಮತ್ತಷ್ಟು ಸಾರ್ಥಕವಾಗುತ್ತದೆ ಎಂದು ಹೇಳಿದರು.
ಕಾಲೇಜಿನ ವಿಶೇಷಾಧಿಕಾರಿ ಡಾ. ಆರ್.ಎಂ. ಜಗದೀಶ್ ಮಾತನಾಡಿ, ಎನ್ಎಸ್ಎಸ್ ಗೀತೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಆಶಯ ಹಾಗೂ ಸೇವೆಯ ಸಂಪೂರ್ಣ ಸಾರ ಅಡಗಿದೆ. ಗೀತೆಯ ಸಂದೇಶವನ್ನು ಕೇವಲ ಹಾಡಿಗೆ ಸೀಮಿತಗೊಳಿಸದೆ, ಅದರ ಆಶಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದರು.
ಇದೇ ವೇಳೆ ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳು ಗಿಡ ನೆಟ್ಟು ಪರಿಸರ ಸಂದೇಶ ಸಾರಿದರು.
ಕಾಲೇಜಿನ ಪ್ರಾಂಶುಪಾಲರಾದ ಪಿ.ಆರ್.ಮಮತಾ ಅಧ್ಯಕ್ಷತೆ ವಹಿಸಿದ್ದರು. ಎನ್ಎಸ್ಎಸ್ ಘಟಕ–1ರ ಕಾರ್ಯಕ್ರಮಾಧಿಕಾರಿ ಪ್ರವೀಣ್ ಬಿ.ಎನ್. ಸ್ವಯಂ ಸೇವಕರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ವಾಣಿಜ್ಯಶಾಸ್ತ್ರದ ವಿಭಾಗದ ಮುಖ್ಯಸ್ಥರಾದ ಶ್ರೀಲಲಿತಾ, ಶ್ರೀಧರ್, ಕ್ರೀಡಾ ವಿಭಾಗದ ಮುಖ್ಯಸ್ಥರಾದ ಡಾ.ಅಂತೋನಿ ಫ್ರಾನ್ಸಿಸ್, ಉಪನ್ಯಾಸಕರಾದ ಗಾಯತ್ರಿ, ನಕ್ಷಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.














