ಆನಂದಪುರ: ಸಮೀಪದ ಗೌತಮಪುರ ಗ್ರಾಮದಲ್ಲಿ ನಡೆಯುತ್ತಿದ್ದ ಅಕ್ರಮ ಜಂಬಿಟ್ಟಿಗೆ ಗಣಿಗಾರಿಕೆ ಮೇಲೆ ಅಧಿಕಾರಿಗಳ ತಂಡ ದಾಳಿ ನಡೆಸಿ ಲಕ್ಷಾಂತರ ರೂ ಮೌಲ್ಯದ ಯಂತ್ರೋಪಕರಣಗಳನ್ನು ವಶಪಡಿಸಿಕೊಂಡಿರುವ ಘಟನೆ ಸೋಮವಾರ (ಏ.20) ನಡೆದಿದೆ.
ಅಧಿಕಾರಿಗಳ ಆಗಮನವನ್ನು ಅರಿತ ಕೆಲಸಗಾರರು ಸ್ಥಳದಿಂದ ಪರಾರಿಯಾಗಿದ್ದಾರೆ.
ಗೌತಮಪುರ ಗ್ರಾಮದ ಸರ್ವೆ ನಂಬರ್ 302, 303 ಮತ್ತು 304 (ಪಿ) ರ ಖಾಸಗಿ ಜಮೀನುಗಳಲ್ಲಿ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಗಣಿಗಾರಿಕೆ ನಡೆಸಲಾಗುತ್ತಿದೆ ಎಂಬ ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಸಾಗರ ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಕಂದಾಯ, ಗಣಿ ಮತ್ತು ಭೂವಿಜ್ಞಾನ ಇಲಾಖೆಗಳು ಜಂಟಿ ಕಾರ್ಯಾಚರಣೆ ನಡೆಸಿದವು. ಈ ವೇಳೆ ಒಂದು ಜಂಬಿಟ್ಟಿಗೆ ಕತ್ತರಿಸುವ ಯಂತ್ರ ಹಾಗೂ ಎರಡು ಟಿಲ್ಲರ್‌ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ > ಮೇ.15ರೊಳಗೆ ಈ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಬೃಹತ್ ಹೋರಾಟ, ಕೆ.ಈ.ಕಾಂತೇಶ್
ಸ್ಥಳದಲ್ಲಿನ ಎರಡು ಪಿಟ್‌ಗಳಿಂದ ಸುಮಾರು 10,216 ಮೆಟ್ರಿಕ್ ಟನ್ ಜಂಬಿಟ್ಟಿಗೆಯನ್ನು ತೆಗೆಯಲಾಗಿತ್ತು. ಇದರ ಮೌಲ್ಯ ಅಂದಾಜು 3,24,000 ರೂಪಾಯಿ ಎಂದು ಅಂದಾಜಿಸಲಾಗಿದೆ.
ಸರ್ಕಾರದ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮ ಗಣಿಗಾರಿಕೆಯನ್ನು ಕಳ್ಳತನದಿಂದ ಮಾಡಿ, ಸರ್ಕಾರಕ್ಕೆ ನಷ್ಟನ್ನುಂಟು ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ದಾಖಲಿಸಲಾಗಿದೆ.
ಸಾಗರ ಉಪವಿಭಾಗಾಧಿಕಾರಿ ವೀರೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ನಡೆದ ಈ ದಾಳಿಯಲ್ಲಿ ತಹಶೀಲ್ದಾರ್ ಪ್ರದೀಪ್ ನಿಕಮ್, ಉಪತಹಶೀಲ್ದಾರ್ ಶಾಂತಮೂರ್ತಿ, ಗಣಿ ಇಲಾಖೆ ಅಧಿಕಾರಿ ಪ್ರವೀಣ್ ಕುಮಾರ್, ಸಬ್‌ಇನ್ಸ್‌ಪೆಕ್ಟರ್ ಪ್ರವೀಣ್ ಹಾಗೂ ಕಂದಾಯ ಇಲಾಖೆಯ ಕವಿರಾಜ್ ಪಾಲ್ಗೊಂಡಿದ್ದರು.
ಆನಂದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.















