ಶಿವಮೊಗ್ಗ : ಮನೆಯಲ್ಲಿದ್ದ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಜಾತಿ ನಿಂದನೆ ಮಾಡಿದ್ದ ವ್ಯಕ್ತಿಗೆ 10 ವರ್ಷ ಕಠಿಣ ಕಾರಗೃಹ ಶಿಕ್ಷೆ ವಿಧಿಸಿ ಶಿವಮೊಗ್ಗ ನ್ಯಾಯಾಲಯ ತೀರ್ಪು ನೀಡಿದೆ.
2023ರ ನವೆಂಬರ್ 2ರಂದು ಈ ಘಟನೆ ನಡೆದಿತ್ತು. ವಿನೋಬ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಮನೆಯಲ್ಲಿ ಮಹಿಳೆ ಒಬ್ಬರೇ ಇದ್ದರು. ಈ ವೇಳೆ ಅಲ್ಲಿಗೆ ಬಂದ 27 ವರ್ಷದ ಯುವಕ ಏಕಾಏಕಿ ಮನೆಗೆ ನುಗ್ಗಿದ್ದನು. ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಜಾತಿ ನಿಂದನೆ ಮಾಡಿ ಜೀವಬೆದರಿಕೆ ಹಾಕಿದ್ದನು ಎಂದು ಆರೋಪಿಸಲಾಗಿತ್ತು.
ಇದನ್ನೂ ಓದಿ > > ಶಿವಮೊಗ್ಗದಲ್ಲಿ ಬಿಜೆಪಿ ಬರ ಅಧ್ಯಯನ, ಅಧಿಕಾರಿಗಳೊಂದಿಗೆ ನಾಯಕರ ಮಹತ್ವದ ಸಭೆ
ಈ ಸಂಬಂಧ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶಿವಮೊಗ್ಗ ಉಪವಿಭಾಗ-ಬಿ ಡಿವೈಎಸ್ಪಿ ಸುರೇಶ್ ಎಂ. ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು. ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು.
ಇದನ್ನೂ ಓದಿ > > 252 ನೇ ತಿಂಗಳ ಸಾಹಿತ್ಯ ಹುಣ್ಣಿಮೆ, ಗುರುಪೂರ್ಣಿಮೆ ಸಂಭ್ರಮ
ಆರೋಪ ಸಾಬೀತಾದ ಹಿನ್ನೆಲೆ ನ್ಯಾಯಾಧೀಶರಾದ ಪ್ರೀತಿ ಕೆ.ಪಿ. ಅವರು ತೀರ್ಪು ನೀಡಿದ್ದಾರೆ. ಆರೋಪಿತನಿಗೆ 10 ವರ್ಷ ಕಠಿಣ ಕಾರಗೃಹ ಶಿಕ್ಷೆ ಹಾಗೂ ₹20,000 ದಂಡ ವಿಧಿಸಿದ್ದಾರೆ. ಜತೆಗೆ, ನೊಂದ ಮಹಿಳೆಗೆ ₹15,000 ಪರಿಹಾರ ನೀಡುವಂತೆಯೂ ಆದೇಶಿಸಿದ್ದಾರೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಪಿ.ಓ. ಪುಷ್ಪಾವಾದ ಮಂಡಿಸಿದ್ದರು.
ಇದನ್ನೂ ಓದಿ > > ಕಾರುಗಳ ನಡುವೆ ಭೀಕರ ಅಪಘಾತ, ಮೂವರಿಗೆ ಗಂಭೀರ ಗಾಯ














