ಶಿವಮೊಗ್ಗ : ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಡುತ್ತಿದ್ದ ಡಾಬಾ ಹಾಗೂ ಮಾಂಸಾಹಾರಿ ಹೋಟೆಲ್‌ಗಳ ಮೇಲೆ ಅಬಕಾರಿ ಇಲಾಖೆಯು ದಾಳಿ ನಡೆಸಿ, 7 ಪ್ರಕರಣಗಳನ್ನು ದಾಖಲಿಸಿಕೊಂಡಿದೆ.
ಶಿವಮೊಗ್ಗ ಜಿಲ್ಲೆಯ ಅಬಕಾರಿ ಉಪ ಆಯುಕ್ತರಾದ ಡಾ. ಕೆ.ಎಸ್. ಮುರಳಿ ಅವರ ಮಾರ್ಗದರ್ಶನದಲ್ಲಿ, ಅಬಕಾರಿ ಉಪ ಅಧೀಕ್ಷಕರಾದ ನೌಷಾದ್ ಅಹಮ್ಮದ್ ಖಾನ್ ಹೆಚ್ (ಶಿವಮೊಗ್ಗ ಉಪ ವಿಭಾಗ) ಹಾಗೂ ಶೀಲಾ ಧಾರಜ್ಕರ್ (ಸಾಗರ ಉಪ ವಿಭಾಗ) ಅವರ ನೇತೃತ್ವದಲ್ಲಿ ಜಿಲ್ಲೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಈ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.
ಇದನ್ನೂ ಓದಿ > >65 ಕವಿಗಳಿಂದ ಕವನ ವಾಚನ, 25 ತಂಡಗಳಿಂದ ಜನಪದ ವೃಂದಗಾಯನ ಸ್ಪರ್ಧೆ ಯಾವಾಗ?
ಶಿವಮೊಗ್ಗ ಮತ್ತು ತೀರ್ಥಹಳ್ಳಿ ತಾಲೂಕಿನ ಗಾಜನೂರು, ಸಕ್ರೆಬೈಲು ಹಾಗೂ ಮಂಡಗದ್ದೆ ಗ್ರಾಮಗಳ ವ್ಯಾಪ್ತಿಯಲ್ಲಿರುವ ಡಾಬಾ ಮತ್ತು ಮಾಂಸಾಹಾರಿ ಹೋಟೆಲ್‌ಗಳ ಮೇಲೆ ಸಾಮೂಹಿಕ ದಾಳಿ ನಡೆಸಲಾಗಿದೆ. ಈ ವೇಳೆ ಗ್ರಾಹಕರಿಗೆ ಅಕ್ರಮವಾಗಿ ಮದ್ಯಪಾನ ಮಾಡಲು ಅವಕಾಶ ನೀಡಿದ್ದ ಹೋಟೆಲ್ ಹಾಗೂ ಡಾಬಾ ಮಾಲೀಕರ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆ-1965 ರ ಕಲಂ-15(ಎ) ಮತ್ತು 32(3) ರ ಅಡಿಯಲ್ಲಿ ಒಟ್ಟು 07 ಮೊಕದ್ದಮೆಗಳನ್ನು ದಾಖಲಿಸಲಾಗಿದೆ.
ಇದನ್ನೂ ಓದಿ > > ಶಿವಮೊಗ್ಗ, ನಿವೃತ್ತ ಬ್ಯಾಂಕ್ ನೌಕರನ ಖಾತೆಯಿಂದ 2.29 ಲಕ್ಷ ಮಾಯ!, ಆಗಿದ್ದೇನು?
ಇನ್ನು ಮುಂದೆ ಯಾವುದೇ ಡಾಬಾ ಅಥವಾ ಮಾಂಸಾಹಾರಿ ಹೋಟೆಲ್‌ಗಳಲ್ಲಿ ಗ್ರಾಹಕರಿಗೆ ಅಕ್ರಮವಾಗಿ ಮದ್ಯ ಸೇವಿಸಲು ಅವಕಾಶ ನೀಡಬಾರದೆಂದು ಅಬಕಾರಿ ಇಲಾಖೆಯು ಮಾಲೀಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ ಎಂದು ಅಬಕಾರಿ ಉಪ ಆಯುಕ್ತ ಡಾ.ಕೆ.ಎಸ್.ಮುರಳಿ ತಿಳಿಸಿದ್ದಾರೆ.















