ಶಿವಮೊಗ್ಗ: ಪರಿಚಯದ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಬೆದರಿಕೆಯೊಡ್ಡಿದ್ದ ಆರೋಪಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಿ ಶಿವಮೊಗ್ಗದ ನ್ಯಾಯಾಲಯ ತೀರ್ಪು ನೀಡಿದೆ.
2020ನೇ ಸಾಲಿನಲ್ಲಿ ತೀರ್ಥಹಳ್ಳಿ ತಾಲೂಕಿನಲ್ಲಿ ಈ ಘಟನೆ ನಡೆದಿತ್ತು. 27 ವರ್ಷದ ವ್ಯಕ್ತಿಯೊಬ್ಬ 22 ವರ್ಷದ ಮಹಿಳೆಯನ್ನು ಪರಿಚಯ ಮಾಡಿಕೊಂಡು, ನಂತರ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದನು. ಅಲ್ಲದೆ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದನು. ಈ ಕುರಿತು ಆಗುಂಬೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಇದನ್ನೂ ಓದಿ > > ಹಾಲ್ನೊರೆಯಂತೆ ದುಮ್ಮಿಕ್ಕುತ್ತಿರುವ ಬಾಳೆಬರೆ ಫಾಲ್ಸ್
ಪ್ರಕರಣದ ತನಿಖೆಯನ್ನು ತೀರ್ಥಹಳ್ಳಿ ವೃತ್ತದ ಆಗಿನ ಸಿಪಿಐ ಪ್ರವೀಣ್ ನೀಲಮ್ಮನವರ್ ಅವರು ಪೂರ್ಣಗೊಳಿಸಿ, ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು.
ಶಿವಮೊಗ್ಗದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸುದೀರ್ಘ ವಿಚಾರಣೆ ನಡೆದಿದ್ದು, ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಶ್ರೀಧರ್ ಅವರು ವಾದ ಮಂಡಿಸಿದ್ದರು.
ಇದನ್ನೂ ಓದಿ > > ಹೊಳೆಹೊನ್ನೂರು, ಜನರ ನಿದ್ದೆಗೆಡಿಸಿದ್ದ ಕೋತಿ (ಮುಷ್ಯ) ಸೆರೆ
ಆರೋಪಿ ಮೇಲೆ ಸಾಕ್ಷ್ಯಾಧಾರಗಳು ದೃಢಪಟ್ಟ ಹಿನ್ನೆಲೆಯಲ್ಲಿ, ನ್ಯಾಯಾಧೀಶರಾದ ನಿಂಗನಗೌಡ ಭ ಪಾಟೀಲ್ ಅವರು ಆರೋಪಿಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 1,12,000 ದಂಡ ವಿಧಿಸಿ ಆದೇಶಿಸಿದ್ದಾರೆ. ಜೊತೆಗೆ ನೊಂದ ಮಹಿಳೆಗೆ 2,00,000 ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.














