ಶಿವಮೊಗ್ಗ : ಬೆಂಗಳೂರಿನಿಂದ ಸಿಗಂದೂರು ದೇವಿ ದರ್ಶನಕ್ಕೆ ತೆರಳುತ್ತಿದ್ದ ಆರು ಮಂದಿ ಸ್ನೇಹಿತರಿದ್ದ ಕಾರು ಶಿವಮೊಗ್ಗದ ಚೋರಡಿ ಬ್ರಿಡ್ಜ್ ಬಳಿ ಅಪಘಾತಕ್ಕೀಡಾಗಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ.
ಆರು ಮಂದಿ ಒಂದೇ ಕಾರಿನಲ್ಲಿ ಬೆಂಗಳೂರಿನಿಂದ ಸಿಗಂದೂರು ಕಡೆ ಪ್ರಯಾಣಿಸುತ್ತಿದ್ದರು. ಚೋರಡಿ ಬ್ರಿಡ್ಜ್ ಸಮೀಪ ರಸ್ತೆ ಬದಿಯ ಡಿವೈಡರ್‌ಗೆ ಕಾರು ಡಿಕ್ಕಿಯಾಗಿ, ನಿಯಂತ್ರಣ ಕಳೆದುಕೊಂಡು ಮೂರು ಬಾರಿ ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ.
ಇದೇ ವೇಳೆ ಕರ್ತವ್ಯದ ನಿಮಿತ್ತ ಶಿವಮೊಗ್ಗ ಕಡೆಗೆ ತೆರಳುತ್ತಿದ್ದ ಸಾಗರ ಪೇಟೆ ಠಾಣೆ ಪೊಲೀಸ್ ಸಿಬ್ಬಂದಿಯ ವಾಹನ ಇದೇ ಮಾರ್ಗದಲ್ಲಿ ಸಾಗುತ್ತಿತ್ತು.
ಅಪಘಾತ ಸಂಭವಿಸಿದ ಸ್ಥಳಕ್ಕೆ ಒಂದೆರಡು ನಿಮಿಷ ಮುಂಚಿತವಾಗಿ ತಲುಪಿದ್ದರೆ, ಪಲ್ಟಿಯಾದ ಕಾರು ತಮ್ಮ ವಾಹನಕ್ಕೂ ಡಿಕ್ಕಿ ಹೊಡೆಯುವ ಸಾಧ್ಯತೆ ಇತ್ತು ಎಂದು ಎಎಸ್‌ಐ ಮೀರಾಬಾಯಿ ತಿಳಿಸಿದ್ದಾರೆ.














