ಶಿವಮೊಗ್ಗ: ನಾಳೆಯಿಂದ ನಗರದಲ್ಲಿ ಆಟೋಗಳ ದಾಖಲೆಗಳನ್ನು ಪರಿಶೀಲನೆ ಮಾಡುತ್ತೇವೆ. ನಿಗದಿತ ದಾಖಲೆಗಳು ಇಲ್ಲದೇ ಹೋದಲ್ಲಿ ಅಂತಹ ಆಟೋವನ್ನು ಸೀಜ್ ಮಾಡಿ ತಗೊಂಡು ಹೋಗುತ್ತೇವೆ ಎಂದು ಟ್ರಾಫಿಕ್ ಸರ್ಕಲ್ ಇನ್ಸ್ಪೆಕ್ಟರ್ ದೇವರಾಜ್ ಅವರು ಆಟೋ ಚಾಲಕರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ರೈಲ್ವೆ ನಿಲ್ದಾಣದ ಬಳಿಯಲ್ಲಿ ಆಟೋ ಚಾಲಕರು ಹಾಗೂ ಮಾಲೀಕರ ಸಂಘದ ಸದಸ್ಯರು ಸಿಟಿ ಬಸ್ಸನ್ನು ತಡೆದು ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿದ ವೇಳೆ ಅವರು ಮಾತನಾಡಿದರು.
ಆಟೋ ಚಾಲಕರ ಮನವಿಯನ್ನು ಆಲಿಸಿದ ಅವರು ಇದೇ ವೇಳೆಯಲ್ಲಿ ಆಟೋ ಚಾಲಕರಿಗೂ ಸಹ ಕೆಲವೊಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ > > ಸಾರಿಗೆ ಸಚಿವ ಭೈರತಿ ಸುರೇಶ್ಗೆ ಚೇತನ್ ಕೆ. ಗೌಡ ಮನವಿ, ಮನವಿಯಲ್ಲೇನಿದೆ?
ನಾಳೆಯಿಂದ ಪರಿಶೀಲನೆ
ಸಿಟಿ ಬಸ್’ಗಳ ವಿಚಾರಲ್ಲಿ ನಿಮ್ಮಗಳ ಬೇಡಿಕೆಯನ್ನು ಆಲಿಸಿದಂತೆಯೇ ನಿಮಗೂ ಸಹ ನಮ್ಮ ನಿಬಂಧನೆಗಳಿವೆ. ನಾಳೆಯಿಂದ ನಗರದಲ್ಲಿ ಆಟೋಗಳನ್ನು ಪರಿಶೀಲನೆ ನಡೆಸುತ್ತೇವೆ. ಎಲ್ಲ ದಾಖಲೆಗಳೂ ಸಹ ಸರಿಯಾಗಿರಬೇಕು. ಇಲ್ಲದೇ ಹೋದಲ್ಲಿ ಅಂತಹ ಆಟೋವನ್ನು ತೆಗೆದುಕೊಂಡು ಹೋಗುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಆಟೋ ಚಾಲಕರಿಗೆ ಏನೆಲ್ಲಾ ಎಚ್ಚರಿಕೆ?
ಬಹಳಷ್ಟು ಆಟೋಗಳಿಗೆ ಫಿಟ್ನೆಸ್ ಸರ್ಟಿಫಿಕೇಟ್ ಇಲ್ಲ ಎಂಬ ದೂರು ಬಂದಿದೆ. ಹೀಗಾಗಿ, ನಾಳೆಯಿಂದ ನಡೆಯುವ ಪರಿಶೀಲನೆ ವೇಳೆ ಫಿಟ್ನೆಸ್ ಸರ್ಟಿಫಿಕೇಟ್, ಇನ್ಷೂರೆನ್ಸ್ ಸೇರಿದಂತೆ ಎಲ್ಲ ದಾಖಲೆಗಳೂ ಸರಿಯಾಗಿರಬೇಕು. ಇಲ್ಲದೇ ಹೋದಲ್ಲಿ ಅಂತಹ ಆಟೋವನ್ನು ಸೀಜ್ ಮಾಡಿ ತೆಗೆದುಕೊಂಡು ಹೋಗುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಇನ್ನು ಪ್ರಮುಖವಾಗಿ, ಬಹಳಷ್ಟು ಆಟೋಗಳಿಗೆ SMG ನಂಬರ್ ಇಲ್ಲ. ಅಂದಾಜು 7,000 ಆಟೋಗಳಲ್ಲಿ 5,000 ಆಟೋಗಳು ಮಾತ್ರ SMG ನಂಬರ್ ಹಾಕಿವೆ. ಉಳಿದ ಪ್ರತಿಯೊಬ್ಬರೂ ಇದನ್ನು ಪಡೆದು ಹಾಕಬೇಕು. ಇದರೊಟ್ಟಿಗೆ ಆಟೋದಲ್ಲಿ ಡಿಸ್ಪ್ಲೇ ಬೋರ್ಡ್ ಕಡ್ಡಾಯವಾಗಿ ಹಾಕಬೇಕು. ಇಲ್ಲದಿದ್ದರೆ ಯಾವುದೇ ಮುಲಾಜಿಲ್ಲದೇ ಆಟೋ ತಗೊಂಡು ಹೋಗುತ್ತೇವೆ ಎಂದು ಚಾಲಕರಿಗೆ ಹಾಗೂ ಮಾಲೀಕರಿಗೆ ಎಚ್ಚರಿಕೆ ನೀಡಿದರು.
ಆಟೋ ಚಾಲಕರ ಪ್ರತಿಭಟನೆ

ಶಿವಮೊಗ್ಗ: ರೈಲ್ವೆ ನಿಲ್ದಾಣದ ಬಳಿ ಬಸ್ನ್ನು ತಡೆದು ರೈಲ್ವೆ ಆಟೋ ನಿಲ್ದಾಣದ ಆಟೋ ಚಾಲಕರು ಹಾಗೂ ಮಾಲೀಕರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ > > ಶಿವಮೊಗ್ಗ, 6 ವರ್ಷಗಳಿಂದ ತಲೆಮರೆಸಿಕೊಂಡಿದ್ದ ರೌಡಿ ಶೀಟರ್ ಅರೆಸ್ಟ್!, ಏನಿದು ಪ್ರಕರಣ?
ರೈಲ್ವೆ ನಿಲ್ದಾಣದ ಗಣಪತಿ ದೇವಸ್ಥಾನದ ಮುಂಭಾಗದಲ್ಲಿ ಬಸ್ ನಿಲ್ಲಿಸಬೇಕು ಎಂದು ಸೂಚಿಸಲಾಗಿದ್ದರೂ ಸಹ ಬಸ್ನ್ನು ಆಟೋ ನಿಲ್ದಾಣದವರೆಗೆ ತಂದು ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗಲಾಗುತ್ತಿದೆ ಎಂದು ಆಟೋ ಚಾಲಕರು ಆರೋಪಿಸಿದರು.
ಒಂದು ವಾರದ ಹಿಂದೆ ಆರ್ಟಿಒ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಿಟಿ ಬಸ್ ಹಾಗೂ ಆಟೋ ಚಾಲಕರ ನಡುವಿನ ಸಮಸ್ಯೆ ಕುರಿತು ಕ್ರಮ ಕೈಗೊಂಡಿದ್ದರು. ಈ ವೇಳೆ ಬಸ್ ನಿಲುಗಡೆಗೆ ಸಂಬಂಧಿಸಿದಂತೆ ನಡೆದ ಕ್ರಮಕ್ಕೆ ವಿಡಿಯೋ ಹಾಗೂ ಫೋಟೋ ಸಾಕ್ಷ್ಯಗಳಿವೆ. ಸಿಟಿ ಬಸ್ಗಳನ್ನು ಸಿಟಿ ಬಸ್ ನಿಲ್ದಾಣದ ಸಮೀಪವೇ ನಿಲ್ಲಿಸಬೇಕು. ಆಟೋ ನಿಲ್ದಾಣದ ಬಳಿ ಬಸ್ಗಳನ್ನು ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಬಾರದು ಎಂಬುದು ನಮ್ಮ ಬೇಡಿಕೆಯಾಗಿದೆ ಎಂದು ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ಅಧ್ಯಕ್ಷ ಅಲ್ಲಾ ಭಕ್ಷಿ ತಿಳಿಸಿದರು.
ಇದನ್ನೂ ಓದಿ > > ಸಾರಿಗೆ ಸಚಿವ ಭೈರತಿ ಸುರೇಶ್ಗೆ ಚೇತನ್ ಕೆ. ಗೌಡ ಮನವಿ, ಮನವಿಯಲ್ಲೇನಿದೆ?
ಪ್ರತಿಭಟನೆಯ ಸಂದರ್ಭದಲ್ಲಿ ಆಟೋ ಚಾಲಕರು ಬಸ್ ನಿಲುಗಡೆ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.














