ಶಿವಮೊಗ್ಗ: ನಗರದ ವಿದ್ಯಾನಗರ 4ನೇ ಅಡ್ಡರಸ್ತೆಯಲ್ಲಿ ಪಿಡಿಒ ಕುಟುಂಬ ವಾಸವಿದ್ದ ಬಾಡಿಗೆ ಮನೆಯಲ್ಲಿ ಭರ್ಜರಿ ಕಳ್ಳತನ ನಡೆದಿದ್ದು, 943 ಗ್ರಾಂ ಚಿನ್ನಾಭರಣ, 500 ಗ್ರಾಂ ಬೆಳ್ಳಿ ವಸ್ತುಗಳು, ₹86 ಸಾವಿರ ನಗದು, 15 ಕೈಗಡಿಯಾರಗಳು ಹಾಗೂ ದೇವರ ಮೂರ್ತಿ ಸೇರಿದಂತೆ ಒಟ್ಟು ₹1,42,29,900 ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ.
ವಿದ್ಯಾನಗರ ನಿವಾಸಿ ಹಾಗೂ ಪಿಡಿಒ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ನಟರಾಜ್ ಕೆ.ಎನ್. (55) ಅವರು ನೀಡಿದ ದೂರಿನ ಆಧಾರದ ಮೇಲೆ ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ > > ಸೆ.1ರಿಂದ ನಂಜಪ್ಪ ಲೈಫ್ ಕೇರ್ನಲ್ಲಿ ಮಂಡಿನೋವು ಉಚಿತ ತಪಾಸಣೆ ಶಿಬಿರ, ಶೇ 20 ರಷ್ಟು ವಿಶೇಷ ರಿಯಾಯಿತಿ!
ಕೆಲಸಕ್ಕೆ ತೆರಳಿದ್ದ ವೇಳೆ ಕಳ್ಳತನ
ದೂರುದಾರ ನಟರಾಜ್ ಕೆ.ಎನ್. ಹಾಗೂ ಅವರ ಪತ್ನಿ ಇಬ್ಬರೂ ಪಿಡಿಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ದಂಪತಿ ತಮ್ಮ ಕುಟುಂಬದೊಂದಿಗೆ ವಿದ್ಯಾನಗರದ 4ನೇ ಅಡ್ಡರಸ್ತೆಯಲ್ಲಿರುವ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ.
ಆಗಸ್ಟ್ 28ರಂದು ಬೆಳಗ್ಗೆ ಸುಮಾರು 11.15ರ ವೇಳೆಗೆ ನಟರಾಜ್ ಹಾಗೂ ಅವರ ಪತ್ನಿ ಕರ್ತವ್ಯಕ್ಕೆಂದು ಮನೆಯನ್ನು ಬೀಗ ಹಾಕಿ ಹೊರಗೆ ತೆರಳಿದ್ದರು. ಸಂಜೆ ವೇಳೆ ಅವರ ಪುತ್ರಿ ವೈಷವಿ ಅವರು ದೂರವಾಣಿ ಮೂಲಕ ಕರೆ ಮಾಡಿ, ಮನೆಯಲ್ಲಿ ಕಳ್ಳತನವಾಗಿರುವುದಾಗಿ ತಿಳಿಸಿದ್ದಾರೆ.
ಮಾಹಿತಿ ತಿಳಿದ ತಕ್ಷಣ ದಂಪತಿ ಮನೆಗೆ ಮರಳಿ ಪರಿಶೀಲಿಸಿದಾಗ, ಮನೆಯ ಮುಖ್ಯ ಬಾಗಿಲಿನ ಬೀಗವನ್ನು ಯಾರೋ ಮುರಿದು ಒಳಗೆ ಪ್ರವೇಶಿಸಿರುವುದು ಕಂಡುಬಂದಿದೆ. ಬಳಿಕ ಬೆಡ್ರೂಮ್ನಲ್ಲಿದ್ದ ಗಾಡ್ರೇಜ್ ಬೀರುವನ್ನು ಒಡೆದು ಅದರಲ್ಲಿದ್ದ ಚಿನ್ನಾಭರಣ ಹಾಗೂ ಇತರ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.
943 ಗ್ರಾಂ ಚಿನ್ನಾಭರಣ ಕಳವು
ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವಿಧ ಬಗೆಯ ಒಟ್ಟು 943 ಗ್ರಾಂ ತೂಕದ ಚಿನ್ನಾಭರಣಗಳು ಕಳುವಾಗಿರುವುದಾಗಿ ಉಲ್ಲೇಖಿಸಲಾಗಿದೆ. ಕಳುವಾದ ಚಿನ್ನಾಭರಣಗಳಲ್ಲಿ ಚಿನ್ನದ ಸರಗಳು, ನೆಕ್ಲೇಸ್ಗಳು, ಬಳೆಗಳು, ಉಂಗುರಗಳು, ಕಿವಿಯೋಲೆಗಳು, ಹ್ಯಾಂಗಿಂಗ್ಸ್, ಪೆಂಡೆಂಟ್ ಹೊಂದಿರುವ ಸರ, ಲಕ್ಷ್ಮಿ ತಾಳಿ, ಚಿನ್ನದ ಗೊಂಬೆಗಳು ಹಾಗೂ ಚಿನ್ನದ ಗಟ್ಟಿ ಸೇರಿದಂತೆ ವಿವಿಧ ವಸ್ತುಗಳು ಸೇರಿವೆ.
ಪೊಲೀಸ್ ದಾಖಲೆಯಲ್ಲಿರುವ ವಿವರಗಳ ಪ್ರಕಾರ, ಕಳುವಾದ ಚಿನ್ನಾಭರಣಗಳ ಪೈಕಿ ಪ್ರಮುಖವಾಗಿ:
- 110 ಗ್ರಾಂ ತೂಕದ ಎರಡು ಉದ್ದನೆಯ ಚಿನ್ನದ ಸರಗಳು
- 69 ಗ್ರಾಂ ತೂಕದ ಮೂರು ಚಿನ್ನದ ನೆಕ್ಲೇಸ್ಗಳು
- 240 ಗ್ರಾಂ ತೂಕದ ಆರು ಚಿನ್ನದ ಬಳೆಗಳು
- 12 ಗ್ರಾಂ ತೂಕದ ಒಂದು ಜೋಡಿ ಚಿನ್ನದ ಕಿವಿಯೋಲೆ
- 120 ಗ್ರಾಂ ತೂಕದ ಹ್ಯಾಂಗಿಂಗ್ಸ್ ಹಾಗೂ ಕಿವಿಯೋಲೆಗಳ ಸೆಟ್
- 40 ಗ್ರಾಂ ತೂಕದ ಎಂಟು ಚಿನ್ನದ ಉಂಗುರಗಳು
- 16 ಗ್ರಾಂ ತೂಕದ ಐದು ಚಿನ್ನದ ಉಂಗುರಗಳು
- 30 ಗ್ರಾಂ ತೂಕದ ಚಿನ್ನದ ಕಿವಿಯೋಲೆಗಳು
- 75 ಗ್ರಾಂ ತೂಕದ ಐದು ಚಿನ್ನದ ಸರಗಳು
- 60 ಗ್ರಾಂ ತೂಕದ ಎರಡು ಚಿನ್ನದ ಬಳೆಗಳು
- 18 ಗ್ರಾಂ ತೂಕದ ಮೂರು ಚಿನ್ನದ ಬಳೆಗಳು
- ಪೆಂಡೆಂಟ್ ಹೊಂದಿರುವ 50 ಗ್ರಾಂ ಚಿನ್ನದ ಸರ
- 15 ಗ್ರಾಂ ಚಿನ್ನದ ಮೂರು ಗೊಂಬೆಗಳು ಹಾಗೂ ಒಂದು ಲಕ್ಷ್ಮಿ ತಾಳಿ
- 10 ಗ್ರಾಂ ತೂಕದ ಒಂದು ಚಿನ್ನದ ಗಟ್ಟಿ
- 78 ಗ್ರಾಂ ತೂಕದ ಐದು ಚಿನ್ನದ ಸರಗಳು
ಸೇರಿದಂತೆ ವಿವಿಧ ಚಿನ್ನಾಭರಣಗಳು ಕಳುವಾಗಿವೆ.
ಬೆಳ್ಳಿ, ನಗದು, ವಾಚ್ಗಳೂ ಕಳ್ಳತನ
ಚಿನ್ನಾಭರಣಗಳ ಜೊತೆಗೆ 500 ಗ್ರಾಂ ತೂಕದ ಬೆಳ್ಳಿ ವಸ್ತುಗಳು, ₹86,000 ನಗದು ಹಾಗೂ ಸುಮಾರು ₹1.50 ಲಕ್ಷ ಮೌಲ್ಯದ 15 ಕೈಗಡಿಯಾರಗಳು ಕಳುವಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಲ್ಲದೆ ₹2,500 ಮೌಲ್ಯದ ವೆಂಕಟೇಶ್ವರ ದೇವರ ಮೂರ್ತಿಯನ್ನೂ ಕಳ್ಳರು ಕೊಂಡೊಯ್ದಿದ್ದಾರೆ ಎಂದು ಪೊಲೀಸರು ದಾಖಲಿಸಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪೊಲೀಸ್ ದಾಖಲೆಯ ಪ್ರಕಾರ ಕಳುವಾದ ಎಲ್ಲಾ ವಸ್ತುಗಳ ಒಟ್ಟು ಅಂದಾಜು ಮೌಲ್ಯ ₹1,42,29,900 ಆಗಿದೆ.
ಇದನ್ನೂ ಓದಿ > > ಕಸ್ತೂರಿ ರಂಗನ್ ವರದಿ | ಜಂಟಿ ಸರ್ವೇ ಮಾಡಿಸಿ, ಸಂಸದ ಬಿ.ವೈ.ರಾಘವೇಂದ್ರ ಮನವಿ
ಸಿಸಿಟಿವಿಯಲ್ಲಿ ಕಳ್ಳನ ಚಲನವಲನ ಸೆರೆ
ಮನೆಯ ಸುತ್ತಮುತ್ತ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಕಳ್ಳನ ಚಲನವಲನಗಳು ಸೆರೆಯಾಗಿವೆ ಎಂದು ತಿಳಿದುಬಂದಿದೆ. ಕಳ್ಳನು ಮನೆಗೆ ಪ್ರವೇಶಿಸಿ ಕಳ್ಳತನ ನಡೆಸಿ ತೆರಳಿರುವ ದೃಶ್ಯಗಳು ಪೊಲೀಸರ ತನಿಖೆಗೆ ಪ್ರಮುಖ ಸುಳಿವಾಗುವ ಸಾಧ್ಯತೆಯಿದೆ.
ಘಟನೆ ಕುರಿತು ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಕಳ್ಳತನದಲ್ಲಿ ಭಾಗಿಯಾಗಿರುವ ವ್ಯಕ್ತಿಯನ್ನು ಪತ್ತೆಹಚ್ಚಲು ಪೊಲೀಸರು ಸಿಸಿಟಿವಿ ದೃಶ್ಯಗಳು ಸೇರಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಕಳುವಾದ ಚಿನ್ನಾಭರಣ, ನಗದು ಹಾಗೂ ಇತರ ವಸ್ತುಗಳನ್ನು ಪತ್ತೆಹಚ್ಚಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.













