ಶಿವಮೊಗ್ಗ: ಒಂದು ಕಾಲದಲ್ಲಿ ಯಾವ ಮನೆಯಲ್ಲಿ ಅತಿ ಹೆಚ್ಚು ಗೋವುಗಳಿರುತ್ತವೆಯೋ ಆತನೇ ದೊಡ್ಡ ಶ್ರೀಮಂತ ಎನ್ನುವ ಪರಿಪಾಠವಿತ್ತು. ಮುಂದಿನ ದಿನಗಳಲ್ಲಿ ವಿಶ್ವದ ಐಟಿ ದಿಗ್ಗಜರು ಕೂಡ ಆಹಾರಕ್ಕಾಗಿ ರೈತರ ಮನೆ ಬಾಗಿಲಿಗೆ ಹೋಗಿ ಭಿಕ್ಷೆ ಬೇಡುವ ಪರಿಸ್ಥಿತಿ ಬರಲಿದೆ ಎಂದು ಕನ್ನೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.
ನಗರದ ಶುಭಮಂಗಳ ಸಮುದಾಯ ಭವನದಲ್ಲಿ ಗೋವರ್ಧನ ಶಿವಮೊಗ್ಗದ ಒಂದು ವರ್ಷದ ಸಾರ್ಥಕ ಗೋಸೇವಾ ಪಯಣದ ಅಂಗವಾಗಿ ಆಯೋಜಿಸಿದ್ದ ‘ಗೋಸೇವಾ ಸಂಭ್ರಮ-2026’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗೋವಿನ ವಿವಿಧ ತಳಿಗಳ ಪ್ರದರ್ಶನ, ಗೋ ಉತ್ಪನ್ನಗಳ ಮಾರಾಟ ಮಳಿಗೆ, ಪ್ರದರ್ಶಿನಿ, ಅಶ್ವಶಕ್ತಿ ಗೊಬ್ಬರ ಹಾಗೂ ಸಾವಯವ ಗೊಬ್ಬರ ಲೋಕಾರ್ಪಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಅವರು ಚಾಲನೆ ನೀಡಿದರು.

ಶ್ರೀಕೃಷ್ಣನ ಕಾಲದಲ್ಲಿ ಹಾಲನ್ನು ವಾಣಿಜ್ಯ ಉದ್ದೇಶಕ್ಕೆ ಮಾರಾಟ ಮಾಡುತ್ತಿರಲಿಲ್ಲ. ಮಕ್ಕಳು ಹಾಗೂ ಕರುಗಳ ಬಳಕೆಗೆ ಹಾಲನ್ನು ಮೀಸಲಿಟ್ಟು, ಉಳಿದ ಹಾಲಿನಿಂದ ತುಪ್ಪ ತಯಾರಿಸಿ ಮಾರಾಟ ಮಾಡಲಾಗುತ್ತಿತ್ತು. ಮಥುರಾದಿಂದ ವಿವಿಧ ದೇಶಗಳಿಗೆ ತುಪ್ಪ ರಫ್ತು ಮಾಡುವ ದೊಡ್ಡ ಉದ್ಯಮವೇ ಆಗಿನ ಕಾಲದಲ್ಲಿತ್ತು ಎಂದು ಹೇಳಿದರು.
ಹಿಂದೆ ಗೋವುಗಳ ಸಂಖ್ಯೆಯೇ ಕುಟುಂಬದ ಸಂಪತ್ತಿನ ಮಾನದಂಡವಾಗಿತ್ತು. 5 ಲಕ್ಷ ಗೋವುಗಳನ್ನು ಹೊಂದಿದ್ದವನನ್ನು ಉಪನಂದ, 10 ಲಕ್ಷ ಗೋವುಗಳಿದ್ದವನನ್ನು ನಂದ, 13 ಲಕ್ಷ ಗೋವುಗಳಿದ್ದವನನ್ನು ವೃಷಭ ಎಂದು ಕರೆಯಲಾಗುತ್ತಿತ್ತು. 10 ಜನ ನಂದರು ಸೇರಿದ್ದ ಪ್ರದೇಶವನ್ನು ಗೋಕುಲ ಎಂದು ಕರೆಯಲಾಗುತ್ತಿತ್ತು ಎಂದು ವಿವರಿಸಿದರು.
ಕೃಷಿ ಮತ್ತು ಹೈನುಗಾರಿಕೆ ದೇಶದ ಶೇ.42ರಷ್ಟು ಜನರಿಗೆ ಉದ್ಯೋಗ ನೀಡುತ್ತಿದ್ದು, ಇಷ್ಟೊಂದು ಉದ್ಯೋಗವನ್ನು ಯಾವುದೇ ಕೈಗಾರಿಕೆಯಿಂದ ನೀಡಲು ಸಾಧ್ಯವಿಲ್ಲ. ಗೋವುಗಳ ಸಂರಕ್ಷಣೆ, ಸಾವಯವ ಕೃಷಿ ಹಾಗೂ ಗೋ ಉತ್ಪನ್ನಗಳ ಬಳಕೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.
ರಾಸಾಯನಿಕ ಗೊಬ್ಬರದಿಂದ ಮಣ್ಣಿನ ಜೀವಾಣುಗಳಿಗೆ ಹಾನಿಯಾಗುತ್ತದೆ. ಆದರೆ ಗೋಮಯ ಹಾಗೂ ಸಾವಯವ ಗೊಬ್ಬರ ಮಣ್ಣಿನ ಫಲವತ್ತತೆಯನ್ನು ಕಾಪಾಡಲು ಸಹಕಾರಿಯಾಗುತ್ತದೆ. ಬಹುಬೆಳೆ ಪದ್ಧತಿ ಅಳವಡಿಸಿಕೊಳ್ಳುವುದರಿಂದ ಕೃಷಿಯಲ್ಲಿ ಹೆಚ್ಚಿನ ಪ್ರಯೋಜನ ಪಡೆಯಬಹುದು ಎಂದು ತಿಳಿಸಿದರು.
ರಾಮಚಂದ್ರಾಪುರ ಮಠದ ಕೃಷ್ಣ ಪ್ರಸಾದ್ ಮಾತನಾಡಿ, ಗೋ ಸಂರಕ್ಷಣೆ ಸವಾಲಿನ ಕೆಲಸವಾಗಿದ್ದು, ಗೋ ನಾಶದ ಪ್ರಕ್ರಿಯೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಗೋವರ್ಧನ ಟ್ರಸ್ಟ್ ಕಳೆದ ಒಂದು ವರ್ಷದಿಂದ ಶಿವಮೊಗ್ಗ ನಗರದಲ್ಲಿ ಗೋವಿನ ಕುರಿತು ಅರಿವು ಮತ್ತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದರು.

ಗೋಸೇವೆ, ಬಡ ವಿದ್ಯಾರ್ಥಿಗಳಿಗೆ ನೆರವು ಹಾಗೂ ಸಾವಯವ ಕೃಷಿಗೆ ಉತ್ತೇಜನ ನೀಡುವುದು ಟ್ರಸ್ಟ್‌ನ ಪ್ರಮುಖ ಉದ್ದೇಶಗಳಾಗಿವೆ. ಕಳೆದ ಒಂದು ವರ್ಷದಲ್ಲಿ ಗೋ ಸಂರಕ್ಷಣೆಗಾಗಿ ಆಂಬುಲೆನ್ಸ್, ನಾಲ್ಕು ಗೋಶಾಲೆಗಳಿಗೆ ಮೇವಿನ ಉತ್ಪಾದನೆ, ವಿಶ್ವಬಂಧು ಗೋಶಾಲೆ ನಿರ್ಮಾಣ ಹಾಗೂ ಗೋ ಉತ್ಪನ್ನಗಳು ಮತ್ತು ಸಾವಯವ ಕೃಷಿಗೆ ಆದ್ಯತೆ ನೀಡಲಾಗಿದೆ. ನಗರದ ಸುಮಾರು 5 ಸಾವಿರ ಗೋಪ್ರೇಮಿಗಳನ್ನು ಒಗ್ಗೂಡಿಸಿ ವಿವಿಧ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಅಶಕ್ತ ಗೋವುಗಳ ಆರೈಕೆಗಾಗಿ **‘ಗೋ ಸಂಜೀವಿನಿ ಧಾಮ’**ವನ್ನೂ ಆರಂಭಿಸಲಾಗಿದೆ.
-ಕೆ.ಇ. ಕಾಂತೇಶ್, ಗೋವರ್ಧನ ಟ್ರಸ್ಟ್ ಅಧ್ಯಕ್ಷ
ಕಾರ್ಯಕ್ರಮದಲ್ಲಿ ಸಾವಯವ ಕೃಷಿಕರು, ಗೋಸೇವಕರು ಹಾಗೂ ನಗರದ ನಾಲ್ಕು ಗೋಶಾಲೆಗಳ ಮುಖ್ಯಸ್ಥರನ್ನು ಸನ್ಮಾನಿಸಲಾಯಿತು. ಮಾಜಿ ಉಪಮುಖ್ಯಮಂತ್ರಿ ಹಾಗೂ ಗೋವರ್ಧನ ಟ್ರಸ್ಟ್ ಮಹಾಪೋಷಕ ಕೆ.ಎಸ್. ಈಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ಗೋವರ್ಧನ ಟ್ರಸ್ಟ್‌ನ ಪ್ರಮುಖರು ಹಾಗೂ ಗಣ್ಯರು ಉಪಸ್ಥಿತರಿದ್ದರು.















