ಶಿವಮೊಗ್ಗ : ಜಮೀನಿನಲ್ಲಿ ಮೆಕ್ಕೆಜೋಳ ಕಟಾವು ಕೆಲಸದಲ್ಲಿ ನಿರತರಾಗಿದ್ದ ವೇಳೆ ಏಕಾಏಕಿ ಹೆಜ್ಜೇನುಗಳು ದಾಳಿ ನಡೆಸಿದ ಪರಿಣಾಮ, ತೀವ್ರವಾಗಿ ಗಾಯಗೊಂಡಿದ್ದ ರೈತರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಶಿವಮೊಗ್ಗ ತಾಲೂಕಿನ ದುಮ್ಮಳ್ಳಿ ಗ್ರಾಮದ ಜಮೀನಿನಲ್ಲಿ ನಡೆದಿದೆ.
ಶಿವಮೊಗ್ಗ ನಗರದ ಹೊರವಲಯದ ಮಲವಗೊಪ್ಪದ ನಿವಾಸಿ ತಿಮ್ಮನಾಯ್ಕ (56) ಮೃತಪಟ್ಟ ರೈತ.
ಇದನ್ನೂ ಓದಿ > > ಶಿವಮೊಗ್ಗದಲ್ಲಿ ಗೋಸೇವಾ ಸಂಭ್ರಮ, ಸಾವಯವ ಗೊಬ್ಬರ, ಗೋ ಉತ್ಪನ್ನಗಳ ಪ್ರದರ್ಶನ
ಘಟನೆಯ ವಿವರ
ಬುಧವಾರ ಸಂಜೆ ತಿಮ್ಮನಾಯ್ಕ ಅವರು ದುಮ್ಮಳ್ಳಿ ಗ್ರಾಮದಲ್ಲಿದ್ದ ತಮ್ಮ ಹೊಲದಲ್ಲಿ ಮೆಕ್ಕೆಜೋಳ ಕಟಾವು ಮಾಡುತ್ತಿದ್ದರು. ಈ ಸಮಯದಲ್ಲಿ ಏಕಾಏಕಿ ಎರಗಿಬಂದ ಹೆಜ್ಜೇನುಗಳ ಹಿಂಡು ಅವರ ಮೇಲೆ ಭೀಕರವಾಗಿ ದಾಳಿ ನಡೆಸಿದೆ. ಜೇನುಗಳ ದಾಳಿಯ ರಭಸಕ್ಕೆ ಸ್ಥಳದಲ್ಲೇ ತೀವ್ರವಾಗಿ ಅಸ್ವಸ್ಥಗೊಂಡ ಅವರನ್ನು ತಕ್ಷಣವೇ ಕುಟುಂಬಸ್ಥರು ಹಾಗೂ ಸ್ಥಳೀಯ ರೈತರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು. ಆದರೆ, ಚಿಕಿತ್ಸೆ ಫಲಿಸದೆ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ದಿಢೀರ್ ಸಂಭವಿಸಿದ ಈ ದುರಂತದಿಂದ ಕುಟುಂಬದ ಯಜಮಾನನನ್ನು ಕಳೆದುಕೊಂಡ ತಿಮ್ಮನಾಯ್ಕ ಅವರ ಕುಟುಂಬಸ್ಥರು ಶೋಕಸಾಗರದಲ್ಲಿ ಮುಳುಗಿದ್ದಾರೆ. ಕಷ್ಟಪಟ್ಟು ದುಡಿಯುತ್ತಿದ್ದ ರೈತನ ಅಗಲಿಕೆಯಿಂದ ಕುಟುಂಬಕ್ಕೆ ಆಸರೆಯಿಲ್ಲದಂತಾಗಿದ್ದು, ಸರ್ಕಾರ ಹಾಗೂ ಅರಣ್ಯ ಇಲಾಖೆ ತಕ್ಷಣವೇ ಮೃತ ರೈತನ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕೆಂದು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ > > ಒತ್ತಡ ನಿಭಾಯಿಸುವ ಕುರಿತು ಜೆಎನ್ಎನ್ಸಿಇಯಲ್ಲಿ ವಿಶೇಷ ಉಪನ್ಯಾಸ
ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














