ಶಿವಮೊಗ್ಗ: ಕೃತಕ ಬುದ್ಧಿಮತ್ತೆ (ಎಐ) ಆರೋಗ್ಯ ಕ್ಷೇತ್ರದಲ್ಲಿ ಹೊಸ ಸಾಧ್ಯತೆಗಳನ್ನು ತೆರೆದಿಡುತ್ತಿದ್ದರೂ, ಅದರ ಬಳಕೆಯ ಕೇಂದ್ರಬಿಂದುವಿನಲ್ಲಿ ಮಾನವೀಯತೆ, ಸಹಾನುಭೂತಿ ಮತ್ತು ರೋಗಿಯ ಅಗತ್ಯತೆಗಳು ಇರಬೇಕು ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಜಂಟಿ ಕಾರ್ಯದರ್ಶಿ ಡಾ. ಪಿ. ನಾರಾಯಣ್ ಹೇಳಿದರು.
ನಗರದ ಜೆ.ಎನ್.ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಂಗಳವಾರ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಮತ್ತು ಮೆಷಿನ್ ಲರ್ನಿಂಗ್ ವಿಭಾಗ, ಇನ್‌ಸ್ಟಿಟ್ಯೂಟ್ ಇನ್ನೋವೇಶನ್ ಕೌನ್ಸಿಲ್ ಸಹಯೋಗದಲ್ಲಿ ಏರ್ಪಡಿಸಿದ್ದ ‘ಎಐ ಅವಲೋಕನ – 2026′ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇದನ್ನೂ ಓದಿ > > ಎ.ಟಿ.ಎನ್.ಸಿ.ಸಿ ಕಾಲೇಜಿನಲ್ಲಿ ಎನ್ಎಸ್ಎಸ್ ದಿನಾಚರಣೆ
ಯಾವುದೇ ಎಐ ಪರಿಹಾರದ ಹೃದಯದಲ್ಲಿ ಮಾನವೀಯ ಸ್ಪರ್ಶ, ಆಲಿಸುವ ಗುಣ, ಸಹಾನುಭೂತಿ ಮತ್ತು ವೈದ್ಯಕೀಯ ನಿರ್ಣಯಗಳು ಸದಾ ಉಳಿಯಬೇಕು. ಆಗ ಮಾತ್ರ ಎಐ ಆಧಾರಿತ ಯೋಜನೆಗಳು ನಿಜವಾದ ಅರ್ಥದಲ್ಲಿ ಸಮಾಜಮುಖಿಯಾಗಲು ಸಾಧ್ಯ. ರೋಗಿಯ ಸಮಸ್ಯೆಯನ್ನು ಅರ್ಥೈಸಿಕೊಂಡು, ಅವರ ನೈಜ ಅಗತ್ಯಗಳಿಗೆ ಸ್ಪಂದಿಸುವ ತಂತ್ರಜ್ಞಾನವೇ ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚು ಅರ್ಥಪೂರ್ಣವಾಗುತ್ತದೆ ಎಂದು ಹೇಳಿದರು.
ಜೆ.ಎನ್.ಎನ್.ಸಿ.ಇ ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್ ಮಾತನಾಡಿ, ಸ್ವಾಯತ್ತ ವಾಹನಗಳ ಬೆಳವಣಿಗೆಯಲ್ಲಿ ಎಐ ಮಹತ್ವ ಪಾತ್ರ ವಹಿಸಿದೆ. ಟೆಸ್ಲಾ ಕಾರುಗಳಂತಹ ಆಧುನಿಕ ವಾಹನಗಳು ಕ್ಯಾಮೆರಾ ಚಿತ್ರಗಳನ್ನು ಅರ್ಥೈಸಿ, ವಾಹನಗಳು ಹಾಗೂ ಪಾದಚಾರಿಗಳನ್ನು ಗುರುತಿಸಿ, ಚಾಲನೆಗೆ ಸಂಬಂಧಿಸಿದ ನಿರ್ಧಾರಗಳಿಗೆ ನೆರವಾಗುತ್ತವೆ. ಸೆನ್ಸರ್‌ಗಳಿಂದ ದೊರೆಯುವ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಸೂಕ್ತ ಕ್ರಮಗಳಾಗಿ ಪರಿವರ್ತಿಸುವಲ್ಲಿ ಅಲ್ಗಾರಿದಮ್‌ಗಳ ಪಾತ್ರ ಮಹತ್ವದ್ದಾಗಿದೆ. ಉತ್ತಮ ಹಾರ್ಡ್‌ವೇರ್‌ನಷ್ಟೇ ಉತ್ತಮ ಸಾಫ್ಟ್‌ವೇರ್ ಕೂಡ ಅಗತ್ಯ ಎಂದರು.
ಕಾಲೇಜಿನ ಸಂಶೋಧನಾ ಡೀನ್ ಡಾ.ಎಸ್.ವಿ.ಸತ್ಯನಾರಾಯಣ, ಎಐ ಮತ್ತು ಎಂಎಲ್ ವಿಭಾಗದ ಮುಖ್ಯಸ್ಥರಾದ ಡಾ.ಚೇತನ್.ಕೆ.ಆರ್ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕ ಡಾ. ಸಯ್ಯಿದ್ ಜೋಹರ್, ನಿಶಾಂತ್ ಎಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಮಾನವ ಚಿಂತನೆ–ಎಐ ಸೃಜನಶೀಲತೆ ಸಂಗಮ
ಎಐ ಜಾಹೀರಾತು ಸವಾಲಿನಲ್ಲಿ ವಿದ್ಯಾರ್ಥಿಗಳು ನೀಡಲಾದ ಸನ್ನಿವೇಶಗಳನ್ನು ಆಧರಿಸಿ ಕೃತಕ ಬುದ್ಧಿಮತ್ತೆಯ ನೆರವಿನಿಂದ ಕಥಾವಸ್ತು, ದೃಶ್ಯ, ವೀಡಿಯೊ, ಧ್ವನಿ, ಸಂಗೀತ ಹಾಗೂ ಸಂಕಲನ ರೂಪಿಸಿ ತಮ್ಮ ಸೃಜನಶೀಲತೆ ಮೆರೆದರು. ಅಲ್ಗಾರಿದಮ್‌ಗಳ ನೆನಪಿಸಿಕೊಳ್ಳುವಿಕೆ, ಎಐನ ತಪ್ಪುಮಾಹಿತಿ ಪತ್ತೆ, ಬಣ್ಣ ಮಾದರಿಗಳ ಪುನರ್‌ನಿರ್ಮಾಣ ಹಾಗೂ ಕ್ರಮಾಧಾರಿತ ಸವಾಲುಗಳು ಗಮನ ಸೆಳೆದವು. ಇದರೊಂದಿಗೆ ಎಐ ರಸಪ್ರಶ್ನೆ, ಡೇಟಾ ಸೆಟ್‌ಗಳ ವಿಶ್ಲೇಷಣೆ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಉತ್ಸುಕರಾಗಿ ಭಾಗವಹಿಸಿದರು.














