ಶಿವಮೊಗ್ಗ : ನಗರದ ಗಾಂಧಿ ಬಜಾರ್ 1ನೇ ಕ್ರಾಸ್‌ನ ಕರಿದೇವರ ಕೇರಿಯಲ್ಲಿ ನಡೆದ ರೌಡಿಶೀಟರ್ ನರಸಿಂಹನ ಕೊಲೆ ಪ್ರಕರಣದ ಐವರು ಆರೋಪಿಗಳನ್ನು ಕೋಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈ ಪೈಕಿ ಮಹಜರು ನಡೆಸುವ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಪ್ರಮುಖ ಆರೋಪಿ, ರೌಡಿಶೀಟರ್ ಮಧು ಅಲಿಯಾಸ್ ಹನುಮಂತು ಎಂಬಾತನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.
ಇದನ್ನೂ ಓದಿ > ಶಿವಮೊಗ್ಗದ ಏಳು ರೈಲುಗಳ ಮಹತ್ವದ ಮಾಹಿತಿ, ಯಶವಂತಪುರ-ಶಿವಮೊಗ್ಗ ರೈಲು ರದ್ದು, ತಾಳಗುಪ್ಪ-ಮೈಸೂರು ರಾತ್ರಿ ರೈಲಿನ ಅಪ್ಡೇಟ್
ಜೂನ್ 12ರಂದು ಇಸ್ಪೀಟ್ ಆಟವಾಡಿಸುತ್ತಿದ್ದ ರೌಡಿಶೀಟರ್ ನರಸಿಂಹನನ್ನು ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರು ಅಂಬು ಅಲಿಯಾಸ್ ಅನಿಲ್, ಮಧು, ರವಿ, ಕತ್ತೆ ಕಾರ್ತಿಕ್ ಹಾಗೂ ಶಬರೀಶ್ ಎಂಬ ಐವರು ಆರೋಪಿಗಳನ್ನು ಬಂಧಿಸಿದ್ದರು.
ಇದನ್ನೂ ಓದಿ > ಶಿವಮೊಗ್ಗ, ವೃದ್ಧೆ–ಸಾಕು ನಾಯಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ!
ಭಾನುವಾರ ಮುಂಜಾನೆ ಆರೋಪಿಗಳನ್ನು ಮಹಜರು ನಡೆಸಲು ಹೊಳೆಬೆನವಳ್ಳಿಗೆ ಕರೆದೊಯ್ದಾಗ, ರೌಡಿಶೀಟರ್ ಮಧು ತಪ್ಪಿಸಿಕೊಳ್ಳುವ ಉದ್ದೇಶದಿಂದ ಪೊಲೀಸ್ ಸಿಬ್ಬಂದಿ ಅಂಜನಪ್ಪ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಪೊಲೀಸರು ಎಚ್ಚರಿಕೆ ನೀಡಿದರೂ ಕೇಳದಿದ್ದಾಗ, ಇನ್ಸ್‌ಪೆಕ್ಟರ್ ಹರೀಶ್ ಪಟೇಲ್ ಅವರು ಆತ್ಮರಕ್ಷಣೆಗಾಗಿ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ.
ಇದನ್ನೂ ಓದಿ > ಶಿವಮೊಗ್ಗದಲ್ಲಿ ಹಾಡಹಗಲೇ ರೌಡಿ ಶೀಟರ್ ಭೀಕರ ಕೊಲೆ!
ಗುಂಡೇಟಿನಿಂದ ಗಾಯಗೊಂಡ ಆರೋಪಿ ಮಧುನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹಲ್ಲೆಯಿಂದ ಗಾಯಗೊಂಡಿರುವ ಪೊಲೀಸ್ ಸಿಬ್ಬಂದಿ ಅಂಜನಪ್ಪ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.














