ಸಾಗರ : ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ನಡೆದ ಮೂರು ಗೋಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ಬೇಧಿಸಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಉಪಾಧೀಕ್ಷಕ ಡಾ. ಬೆನಕ ಪ್ರಸಾದ್ ತಿಳಿಸಿದರು.
ಇಲ್ಲಿನ ಡಿವೈಎಸ್ಪಿ ಕಚೇರಿಯಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಘಟನೆ ನಡೆದ ಸ್ಥಳದ ಸಿಸಿ ಟಿವಿ ದೃಶ್ಯಾವಳಿಯನ್ನು ಆಧರಿಸಿ ಭದ್ರಾವತಿಯ ದಡಂಘಟ್ಟ ಭಾಗದ ಇಬ್ಬರು ಆರೋಪಿಗಳ ಪೈಕಿ ಓರ್ವನನ್ನು ವಶಕ್ಕೆ ಪಡೆದಿದ್ದು ಇನೋರ್ವ ತಪ್ಪಿಸಿಕೊಂಡಿದ್ದಾನೆ ಎಂದು ಹೇಳಿದರು.
ಇದನ್ನೂ ಓದಿ > > ಶಿವಮೊಗ್ಗದಲ್ಲಿ ಗೋಸೇವಾ ಸಂಭ್ರಮ, ಸಾವಯವ ಗೊಬ್ಬರ, ಗೋ ಉತ್ಪನ್ನಗಳ ಪ್ರದರ್ಶನ
ಸಾಗರದ ವಾಟರ್ ಟ್ಯಾಂಕ್ ಹತ್ತಿರ ಹಸುವೊಂದನ್ನು ಹಿಡಿಯಲು ಅದರ ಮೇಲೆ ಹಲ್ಲೆ ಮಾಡಿದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ಘಟನೆ ಸಹ ಬಂಧಿತ ಭದ್ರಾವತಿಯ ನಸ್ರು ಬೆಂಬಲಿಗರೇ ಮಾಡಿದ್ದು ಒಪ್ಪಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಜಾನುವಾರು ಕಳ್ಳತನಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುತ್ತದೆ. ಈಚೆಗೆ ಪ್ರಜಾಸೇವೆ ಕಾರ್ಯಕ್ರಮದಲ್ಲಿ ಶಾಸಕರು ಗೋಕಳ್ಳತ ಬಗ್ಗೆ ಕಟ್ಟುನಿಟ್ಟಿನ ಕ್ರಮ ವಹಿಸಲು ಸೂಚನೆ ನೀಡಿದ್ದರು. ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಇದಕ್ಕಾಗಿ ವಿಶೇಷ ತಂಡ ರಚನೆ ಮಾಡಿದೆ. ಮುಂದೆ ಎಲ್ಲಿಯೂ ಗೋಕಳ್ಳತನ, ಸಾಗಾಣಿಕೆ ಆಗದಂತೆ ಗಮನ ಹರಿಸಲಿದೆ ಎಂದು ಹೇಳಿದರು.
ಇದನ್ನೂ ಓದಿ > > ಕಲ್ಲಿಹಾಳ್ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ, ಕಾಲುವೆಯಲ್ಲಿ ನವಜಾತ ಹೆಣ್ಣು ಶಿಶುವಿನ ಶವ ಪತ್ತೆ!
ಮಹಿಳೆಯರು ನಿರ್ಭಯವಾಗಿ ದೂರು ನೀಡಿ
ತಾಲ್ಲೂಕಿನಲ್ಲಿ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ಸೇರಿ ಯಾವುದೇ ಪ್ರಕರಣ ಇದ್ದರೂ ಹೆಣ್ಣುಮಕ್ಕಳು ನಿರ್ಭಯವಾಗಿ ದೂರು ಕೊಡಬಹುದು. ನೇರವಾಗಿ ನನ್ನ ಗಮನಕ್ಕೂ ತಂದರೆ ನ್ಯಾಯ ದೊರಕಿಸಿ ಕೊಡುತ್ತೇವೆ. ತಾಲ್ಲೂಕಿನಲ್ಲಿ ಕಳ್ಳತನ ಪ್ರಕರಣಕ್ಕೆ ಕಡಿವಾಣ ಹಾಕಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಗ್ರಾಮೀಣ ಭಾಗದಲ್ಲಿ ಪಂಪ್ಸೆಟ್ ಕೇಬಲ್ ಕಳ್ಳತನ ಮಾಡುತ್ತಿರುವುದರ ವಿರುದ್ದ ಪ್ರಕರಣಗಳು ದಾಖಲಾಗಿದೆ. ಕದ್ದ ತಾಮ್ರದ ತಂತಿಗಳನ್ನು ಅಂಗಡಿಯವರು ಖರೀದಿ ಮಾಡಿದರೆ ಅವರ ವಿರುದ್ದ ಸಹ ಪ್ರಕರಣ ದಾಖಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಗಾಂಜಾ ಸೇವನೆ ಪ್ರಕರಣದಲ್ಲಿ ಐವರ ವಿರುದ್ಧ ಕೇಸ್
ಈಚೆಗೆ ವಸತಿಗೃಹವೊಂದರಲ್ಲಿ ನಾಲ್ವರು ವಿಚಿತ್ರವಾಗಿ ವರ್ತಿಸುತ್ತಿರುವ ಬಗ್ಗೆ ಇಲಾಖೆಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಿದಾಗ ಓರ್ವ ಯುವತಿ, ಮೂವರು ಯುವಕರು ಸಿಕ್ಕಿಬಿದ್ದಿದ್ದು ಅವರು ಗಾಂಜಾ ಸೇವನೆಗೆ ಸಿದ್ದತೆ ನಡೆಸಿದ್ದರು ಎನ್ನುವುದು ಗೊತ್ತಾಗಿದೆ. ಇವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿದ್ದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಗಾಂಜಾ ಸೇವನೆ ಮಾಡಿದ ನಾಲ್ವರು, ಸರಬರಾಜು ಮಾಡಿದ ಓರ್ವನೂ ಸೇರಿ ಐವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ > > ಸೂಡಾ ಅಧ್ಯಕ್ಷ ಮಧುಸೂದನ್ರಿಗೆ ಅಭಿನಂದಿಸಿದ ಸಚಿವ ಮಧು ಬಂಗಾರಪ್ಪ
ನಗರ ಠಾಣೆ ವೃತ್ತ ನಿರೀಕ್ಷಕ ಪುಲ್ಲಯ್ಯ ರಾಥೋಡ್ ಇನ್ನಿತರರು ಹಾಜರಿದ್ದರು.\
















