ಶಿವಮೊಗ್ಗ: ಹೆಣ್ಣುಮಕ್ಕಳು ಇಂದಿನ ಸಮಾಜದಲ್ಲಿ ಎದುರಿಸುತ್ತಿರುವ ವಿವಿಧ ಸಾಮಾಜಿಕ ಹಾಗೂ ಮಾನಸಿಕ ಸವಾಲುಗಳನ್ನು ಅರ್ಥಮಾಡಿಕೊಂಡು, ಅಂತರಾಳದ ಮಹತ್ವದೊಂದಿಗೆ ಅಗತ್ಯ ಬೆಂಬಲ ಮತ್ತು ನ್ಯಾಯಯುತ ಸ್ಪಂದನೆ ನೀಡಿದಾಗ ಮಾತ್ರ ನಿಜವಾದ ಸ್ತ್ರೀ ಸಂವೇದನೆ ಸಾಧ್ಯ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಅಭಿಪ್ರಾಯಪಟ್ಟರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಗುರುವಾರ ಕಸ್ತೂರಬಾ ಬಾಲಿಕಾ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಾಜಕ್ಕೆ ಉಪಯುಕ್ತವಾಗುವ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ದತ್ತಿನಿಧಿ ಕಾರ್ಯಕ್ರಮಗಳು ಪೂರಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತವೆ. ಸಾಮಾಜಿಕ ಸುಧಾರಣೆಗೆ ಅಪಾರ ಕೊಡುಗೆ ನೀಡಿದ ಶಾಂತವೇರಿ ಗೋಪಾಲಗೌಡರ ವ್ಯಕ್ತಿತ್ವ ಇಂದಿಗೂ ಸಮಾಜಕ್ಕೆ ಆದರ್ಶವಾಗಿದೆ.
ಸ್ತ್ರೀ ಸಂವೇದನೆಗೆ ಯಾವುದೇ ಸಿದ್ಧಾಂತಗಳಿಗಿಂತ, ಮಾನವೀಯತೆ ಮತ್ತು ಅಂತರಾಳದ ಕಾಳಜಿಯೇ ಮುಖ್ಯ. ವಚನಗಾರರು ತಮ್ಮ ಬರಹಗಳ ಮೂಲಕ ಸ್ತ್ರೀ ಸಮಾನತೆ ಹಾಗೂ ಸಂವೇದನೆಯ ಮಹತ್ವವನ್ನು ಸಾರಿದ್ದಾರೆ. ಹೊಸ ತಲೆಮಾರು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಪುಸ್ತಕಗಳು ಜ್ಞಾನವನ್ನು ವೃದ್ಧಿಸುವುದರ ಜೊತೆಗೆ ವ್ಯಕ್ತಿತ್ವ ಆತ್ಮವಿಶ್ವಾಸವನ್ನು ರೂಪಿಸುತ್ತವೆ. ಜ್ಞಾನವಂತರಿಗೆ ಮಾತ್ರ ಸಮಾಜದಲ್ಲಿ ನಿಜವಾದ ಗೌರವ ದೊರೆಯುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ನಿರಂತರವಾಗಿ ಪುಸ್ತಕಗಳನ್ನು ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು. ಇದರಿಂದ ಮೊದಲು ನಮ್ಮನ್ನು ನಾವು ಗೌರವಿಸಿಕೊಳ್ಳಲು ಪ್ರಾರಂಭಿಸುತ್ತೇವೆ.
ನಾಣ್ಯ ಸಂಗ್ರಹ ಹಾಗೂ ಅಧ್ಯಯನಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ. ನಾಣ್ಯಗಳು ನಮ್ಮ ಇತಿಹಾಸ, ಸಂಸ್ಕೃತಿ ಮತ್ತು ಆರ್ಥಿಕ ವ್ಯವಸ್ಥೆಯ ಅಮೂಲ್ಯ ದಾಖಲೆಗಳಾಗಿವೆ. ಇತಿಹಾಸವನ್ನು ಅರ್ಥಮಾಡಿಕೊಳ್ಳುವಲ್ಲಿ ನಾಣ್ಯಗಳ ಅಧ್ಯಯನ ಮಹತ್ವದ ಪೂರಕ ಸಾಧನವಾಗಿದೆ ಎಂದು ಹೇಳಿದರು.
ಇದನ್ನೂ ಓದಿ > > ಭದ್ರಾವತಿ, ಸಂಚಾರಿ ಪೊಲೀಸರ ವಿಶೇಷ ಕಾರ್ಯಾಚರಣೆ, 35 ಬೈಕ್ ವಶ!
ಸಾಹಿತಿ ಎಂ.ಬಿ.ನಟರಾಜ ಅವರು ಸ್ಥಾಪಿಸಿದ ಶಾಂತವೇರಿ ಗೋಪಾಲಗೌಡರ ಸ್ಮಾರಕ ದತ್ತಿಯ ಆಶಯದಂತೆ ಕನ್ನಡ ಸಾಹಿತ್ಯ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸ್ತ್ರೀ ಸಂವೇದನೆ ಕುರಿತು ಸಾಹಿತಿ ಡಾ.ಸಬಿತಾ ಬನ್ನಾಡಿ ಮಾತನಾಡಿ, ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಸ್ತ್ರೀ ಸಂವೇದನೆ ಕುರಿತು ಸಮರ್ಪಕವಾಗಿ ಬರೆಯದೇ ಇರಲು ಏನು ಕಾರಣ ಎಂಬ ಪ್ರಶ್ನೆಯನ್ನು ನಾವು ಗಂಭೀರವಾಗಿ ಚಿಂತಿಸಬೇಕಿದೆ.
ವಚನ ಚಳುವಳಿಯವರೆಗೆ ಸಾಹಿತ್ಯದಲ್ಲಿ, ಸ್ತ್ರೀ ಬದುಕು ಮತ್ತು ಅನುಭವಗಳಿಗೆ ಸಮರ್ಪಕವಾದ ಸಂವೇದನೆ ಕಾಣಿಸದಿರುವುದು ಗಮನಾರ್ಹ ಸಂಗತಿ. ಇಂದಿನ ಸಂದರ್ಭದಲ್ಲಿ ದಲಿತ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗದ ಮಹಿಳೆಯರ ಬದುಕಿನ ಅನುಭವಗಳನ್ನು ಪ್ರತ್ಯೇಕವಾಗಿ ಪರಿಗಣಿಸಿ ಚರ್ಚಿಸುವ ಅಗತ್ಯವಿದೆ.
ಲೈಂಗಿಕ ಕಿರುಕುಳವು ಕೇವಲ ಮಹಿಳೆಯರಿಗೆ ಮಾತ್ರವಲ್ಲ, ಪುರುಷರಿಗೂ ಎದುರಾಗಬಹುದು. ಇಂತಹ ಕಿರುಕುಳಗಳಿಗೆ ಯಾರೂ ಬಲಿಯಾಗದಂತೆ ಎಚ್ಚರಿಕೆಯಿಂದ ಇರಬೇಕು. ಪರಸ್ಪರ ಸಹೋದರ-ಸಹೋದರಿಯರ ಭಾವನೆಯೊಂದಿಗೆ ಒಬ್ಬರನ್ನೊಬ್ಬರು ಗೌರವಿಸಿ, ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಂಡು, ಅವುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿನರಾಜ್ ಹೆಗಡೆ ಸ್ಮಾರಕ ದತ್ತಿ ಆಶಯದಂತೆ ಶಿಕ್ಷಣ, ಇತಿಹಾಸ, ನಾಣ್ಯಗಳ ಸಂಗ್ರಹ ಮಹತ್ವ ಕುರಿತು ನಾಣ್ಯ ಸಂಗ್ರಹಕಾರರಾದ ಮೇರಿ ಡಿಸೋಜ ಮಾತನಾಡಿದರು.
ಇದನ್ನೂ ಓದಿ > > ಹೊಳೆಹೊನ್ನೂರು, ಡ್ರೋಣ್ ಬಳಸಿ ಪೊಲೀಸ್ ದಾಳಿ, 5 ಜನರ ಬಂಧನ
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ.ಮಂಜುನಾಥ ಮಾತನಾಡಿದರು. ಪ್ರಾಂಶುಪಾಲರಾದ ರವಿಕುಮಾರ್.ಎಸ್.ಎಚ್ ಅಧ್ಯಕ್ಷತೆ ವಹಿಸಿದ್ದರು. ಪಿಯುಸಿ ವಿದ್ಯಾರ್ಥಿನಿ ಹಂಸಿಕ ತಮ್ಮ ಸ್ವರಚಿತ ಕವನ ವಾಚಿಸಿದರು. ವಿದ್ಯಾರ್ಥಿನಿ ಚಂದನ ಪ್ರಾರ್ಥಿಸಿ, ಉಪನ್ಯಾಸಕಿ ಲಕ್ಷ್ಮೀ ನಿರೂಪಿಸಿದರು.














