ಶಿವಮೊಗ್ಗ : ರಾಜ್ಯ ಕಾಂಗ್ರೆಸ್ ಸರ್ಕಾರವು ಆಡಳಿತದಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು, ನೇಮಕಾತಿ ಪ್ರಕ್ರಿಯೆಗಳು, ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ಯುವಜನರ ಭವಿಷ್ಯದೊಂದಿಗೆ ಚೆಲ್ಲಾಟ ನಡೆಸುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಶಿವಮೊಗ್ಗದಲ್ಲಿ ತೀವ್ರ ವಾಗ್ದಾಳಿ ನಡೆಸಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದರು.
ಕೇಂದ್ರ ಸರ್ಕಾರದ ವಿರುದ್ಧ ನೀಟ್ ಪರೀಕ್ಷೆ ವಿಚಾರವಾಗಿ ಪ್ರಶ್ನೆಗಳನ್ನು ಎತ್ತುವ ಕಾಂಗ್ರೆಸ್ ನಾಯಕರು ತಮ್ಮ ಮನೆಯಲ್ಲಿರುವ ಸಮಸ್ಯೆಗಳನ್ನು ಕಡೆಗಣಿಸಿ, ಪಕ್ಕದ ಮನೆಯ ಸಮಸ್ಯೆಗಳ ಬಗ್ಗೆ ಮಾತನಾಡುವವರಂತಿದ್ದಾರೆ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ > > ಯುವಕನಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ, ಏನಿದು ಪ್ರಕರಣ?
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 38 ತಿಂಗಳು ಕಳೆದಿದ್ದರೂ ಮೂರು ಲಕ್ಷಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಈ ಅವಧಿಯಲ್ಲಿ ನಡೆದ ಬಹುತೇಕ ಎಲ್ಲಾ ನೇಮಕಾತಿ ಪರೀಕ್ಷೆಗಳಲ್ಲೂ ಹಗರಣಗಳು ಮತ್ತು ಅವ್ಯವಸ್ಥೆಗಳು ನಡೆದಿವೆ ಎಂದು ಆರೋಪಿಸಿದರು.
ಉದ್ಯೋಗಾಕಾಂಕ್ಷಿಗಳು ನ್ಯಾಯಸಮ್ಮತ ನೇಮಕಾತಿಗಾಗಿ ಈಗಾಗಲೇ ಹತ್ತು ಬಾರಿ ರಾಜ್ಯದಾದ್ಯಂತ ಹೋರಾಟ ನಡೆಸಿದ್ದರೂ ಸರ್ಕಾರ ಯಾವುದೇ ಸ್ಪಂದನೆ ನೀಡದೆ, ತನ್ನದೇ ದಾರಿಯಲ್ಲಿ ನಡೆಯುತ್ತಿದೆ ಎಂದು ಅವರು ಟೀಕಿಸಿದರು.
ರಾಜ್ಯ ಸರ್ಕಾರವು ಯುವಜನರನ್ನು ಉದ್ಯೋಗದ ಬದಲು ಮಾದಕದ್ರವ್ಯಗಳ ಕಡೆಗೆ ತಳ್ಳುತ್ತಿದ್ದು, ವಿರೋಧ ಪಕ್ಷಗಳ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುತ್ತಾ ರಾಜ್ಯದ ಭವಿಷ್ಯವನ್ನು ಹಾಳು ಮಾಡುತ್ತಿದೆ ಎಂದು ಹೇಳಿದರು.
ಕೆಎಎಸ್ ಸೇರಿದಂತೆ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಿರಂತರ ಗೊಂದಲಗಳು ಉಂಟಾಗಿವೆ. ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ಜೊತೆಗೆ, ಇಂಗ್ಲಿಷ್ ಪ್ರಶ್ನೆಪತ್ರಿಕೆ ಸರಿಯಾಗಿದ್ದರೂ ಕನ್ನಡ ಅನುವಾದದಲ್ಲಿ ಮೊದಲ ಪರೀಕ್ಷೆಯಲ್ಲಿ 92 ಪ್ರಶ್ನೆಗಳಲ್ಲಿ ದೋಷಗಳು ಕಂಡುಬಂದಿದ್ದವು. ಬಳಿಕ ಪರೀಕ್ಷೆಯನ್ನು ಮರುನಡೆಸಿದಾಗ ಕನ್ನಡ ಅನುವಾದದಲ್ಲಿ 112 ಪ್ರಶ್ನೆಗಳಲ್ಲಿ ತಪ್ಪುಗಳು ಪತ್ತೆಯಾಗಿದ್ದು, ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಉತ್ತೀರ್ಣರಾಗದಂತೆ ಉದ್ದೇಶಪೂರ್ವಕವಾಗಿ ಮಾಡಲಾಗಿದೆ ಎಂಬ ಅನುಮಾನ ಮೂಡಿಸಿದೆ ಎಂದು ಆರೋಪಿಸಿದರು.
ಇದನ್ನೂ ಓದಿ > > ಟಿಟಿ – ಸ್ಕೂಟಿ ನಡುವೆ ಭೀಕರ ಅಪಘಾತ, ಟಿಟಿ ಅಡಿಯಲ್ಲಿ ಸಿಲುಕಿದ ಸ್ಕೂಟಿ!
ಇಂಗ್ಲಿಷ್ ಮಾಧ್ಯಮದಲ್ಲಿ ಪರೀಕ್ಷೆ ಬರೆದವರು ಹೆಚ್ಚಿನ ಹಣ ನೀಡುತ್ತಾರೆ, ಕನ್ನಡ ಮಾಧ್ಯಮದ ಅಭ್ಯರ್ಥಿಗಳು ಹಣ ನೀಡುವುದಿಲ್ಲ ಎಂಬ ಮನೋಭಾವ ಸರ್ಕಾರದಲ್ಲಿದೆ ಎಂದು ಅವರು ಕಿಡಿಕಾರಿದರು.
ಸರ್ಕಾರವು ಪರೀಕ್ಷೆಗಳನ್ನು ನಡೆಸಿದರೂ ಇಂದಿನವರೆಗೂ ನೇಮಕಾತಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿಲ್ಲ. ಸಿಟಿಒ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ (ಎಇಇ), ಎಡಿಎಲ್‌ಆರ್ ಕ್ಲಾಸ್–ಬಿ ಸೇರಿದಂತೆ ಹಲವು ನೇಮಕಾತಿ ಪರೀಕ್ಷೆಗಳಲ್ಲೂ ಗೊಂದಲ ಉಂಟುಮಾಡಲಾಗಿದೆ ಎಂದು ಹೇಳಿದರು.
ಪಶುವೈದ್ಯರ ನೇಮಕಾತಿಯಲ್ಲಿ 600 ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿ, ಅವರಲ್ಲಿ 400 ಅಭ್ಯರ್ಥಿಗಳಿಂದ ತಲಾ ₹80 ಲಕ್ಷ ಹಣ ಪಡೆಯಲು ಒತ್ತಡ ಹೇರಲಾಗಿದೆ ಎಂಬ ಆರೋಪವನ್ನೂ ಅವರು ಮಾಡಿದರು. ಈ ಪ್ರಕ್ರಿಯೆ ಹಿಂದಿನ ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿಯೇ ನಡೆದಿತ್ತೆಂದು ಆರೋಪಿಸಿದ ಅವರು, ಫಲಿತಾಂಶವನ್ನು ತಕ್ಷಣ ಪ್ರಕಟಿಸಿದ್ದರೆ ಅಭ್ಯರ್ಥಿಗಳು ಯಾವುದೇ ಹಣ ನೀಡುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದರು. ಬದಲಾಗಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ಸಂಪರ್ಕಿಸಿ ಹಣದ ಬೇಡಿಕೆ ಇಟ್ಟಿರುವುದು ಭ್ರಷ್ಟಾಚಾರದ ಸ್ಪಷ್ಟ ಉದಾಹರಣೆಯಾಗಿದೆ ಎಂದು ಹೇಳಿದರು.
ಪ್ರಾಧ್ಯಾಪಕರ ನೇಮಕಾತಿ, ಪಿಡಿಒ, ಎಇ, ಜೆಇ ಸೇರಿದಂತೆ ವಿವಿಧ ಇಲಾಖೆಗಳ ನೇಮಕಾತಿಗಳಲ್ಲೂ ಸರ್ಕಾರ ಗೊಂದಲ ಸೃಷ್ಟಿಸಿದೆ ಎಂದು ಆರೋಪಿಸಿದ ಅವರು, ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳಿಂದ ಕೃಷಿ ಸಹಾಯಕರ ನೇಮಕಾತಿವರೆಗಿನ ಪರೀಕ್ಷೆಗಳಲ್ಲಿ ಒಎಂಆರ್ ಶೀಟ್‌ಗಳನ್ನು ತಿದ್ದುಪಡಿ ಮಾಡಿ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಲಾಗಿದೆ ಎಂದು ದೂರಿದರು.
ಆಗಸ್ಟ್ 2, 2026ರಂದು ನಡೆದ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯಲ್ಲೂ ಹಲವು ಅಕ್ರಮಗಳು ನಡೆದಿವೆ ಎಂದು ಆರೋಪಿಸಿದ ಅವರು, ಬೆಳಿಗ್ಗೆ 10.30ಕ್ಕೆ ನೀಡಬೇಕಿದ್ದ ಪ್ರಶ್ನೆಪತ್ರಿಕೆಗಳನ್ನು ಕೆಲ ಪರೀಕ್ಷಾ ಕೇಂದ್ರಗಳಲ್ಲಿ 11.30ರವರೆಗೆ ವಿಳಂಬವಾಗಿ ವಿತರಿಸಲಾಗಿದೆ. ಇದರಿಂದ ಅಭ್ಯರ್ಥಿಗಳು ಉತ್ತೀರ್ಣರಾಗದಂತೆ ಉದ್ದೇಶಪೂರ್ವಕ ಗೊಂದಲ ಸೃಷ್ಟಿಸಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ > > ಹಾಲ್ನೊರೆಯಂತೆ ದುಮ್ಮಿಕ್ಕುತ್ತಿರುವ ಬಾಳೆಬರೆ ಫಾಲ್ಸ್
ಒಎಂಆರ್ ಶೀಟ್ ಮತ್ತು ಪ್ರಶ್ನೆಪತ್ರಿಕೆಯಲ್ಲಿ ಒಂದೇ ಸಂಖ್ಯೆಯಿರಬೇಕು ಎಂಬ ನಿಯಮವಿದ್ದರೂ, ಅನೇಕ ಕಡೆ ಸಂಖ್ಯೆಗಳ ವ್ಯತ್ಯಾಸ ಕಂಡುಬಂದಿದೆ. ಅಲ್ಲದೆ ಕೇವಲ ಐದು ನಿಮಿಷ ತಡವಾಗಿ ಬಂದ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡದೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದರು.
2004ರಲ್ಲಿ ಪಿ.ಸಿ. ಹೋಟಾ ಸಮಿತಿಯು ನೀಡಿದ ವರದಿಯನ್ನು 2016ರಲ್ಲಿ ಅಂದಿನ ಕಾನೂನು ಸಚಿವ ಟಿ.ಬಿ. ಜಯಚಂದ್ರ ಸ್ವೀಕರಿಸಿದ್ದರೂ, ಮೂರು ವರ್ಷಗಳಿಂದ ಕಾಂಗ್ರೆಸ್ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಪಿ.ಸಿ. ಹೋಟಾ ಸಮಿತಿಯ ಶಿಫಾರಸುಗಳು ಹಾಗೂ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ನೇತೃತ್ವದಲ್ಲಿ ಯುಪಿಎ ಅವಧಿಯಲ್ಲಿ ಸೂಚಿಸಲಾದ ಸುಧಾರಣೆಗಳನ್ನೂ ಜಾರಿಗೆ ತರದಿರುವುದು ಸರ್ಕಾರದ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಹೇಳಿದರು.
ಕೆಪಿಎಸ್ಸಿಯನ್ನು ವಿಸರ್ಜಿಸಬೇಕು ಎಂಬ ಬೇಡಿಕೆಗಳು ಕೇಳಿಬರುತ್ತಿವೆ. ಆದರೆ ಕಾನೂನಿನ ಪ್ರಕಾರ ಕೆಪಿಎಸ್ಸಿಯನ್ನು ವಿಸರ್ಜಿಸುವುದು ಸಾಧ್ಯವಿಲ್ಲ. ಅದರ ಬದಲಿಗೆ ಅಗತ್ಯ ಪರಿಷ್ಕರಣೆಗಳನ್ನು ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕಿದ್ದು, ಸರ್ಕಾರ ಅದನ್ನು ಮಾಡದೆ ಕೇವಲ ಹೇಳಿಕೆಗಳಿಗೆ ಸೀಮಿತವಾಗಿದೆ ಎಂದು ಟೀಕಿಸಿದರು.
ಕೆಇಎ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿಯೂ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಅವ್ಯವಸ್ಥೆಗಳು ನಡೆದಿವೆ. ಈ ಎಲ್ಲ ಬೆಳವಣಿಗೆಗಳ ಬಗ್ಗೆ ಸರ್ಕಾರ ಯಾವುದೇ ಗಂಭೀರ ಕ್ರಮ ಕೈಗೊಂಡಿಲ್ಲ ಎಂದು ದೂರಿದ ಅವರು, ಯುವಜನತೆಗೆ ಉದ್ಯೋಗದ ಬದಲು ಡ್ರಗ್ಸ್ ಹಾಗೂ ಪ್ರಶ್ನೆಪತ್ರಿಕೆ ಹಗರಣಗಳ ಮೂಲಕ ರಾಜ್ಯದ ಭವಿಷ್ಯಕ್ಕೆ ಬೆಂಕಿ ಹಚ್ಚುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಶಾಂತ್ ಕುಕ್ಕೆ, ಪ್ರಧಾನ ಕಾರ್ಯದರ್ಶಿಗಳಾದ ಅರುಣ್ ಕುಗ್ವೆ ಹಾಗೂ ದರ್ಶನ್, ಜಿಲ್ಲಾ ಮಾಧ್ಯಮ ಪ್ರಮುಖ ಚಂದ್ರಶೇಖರ್ ಎಸ್., ಮಂಜುನಾಥ್ ಎನ್. ಹಾಗೂ ಜಿಲ್ಲಾ ಸಾಮಾಜಿಕ ಜಾಲತಾಣ ಪ್ರಮುಖ ಶರತ್ ಕಲ್ಯಾಣಿ ಉಪಸ್ಥಿತರಿದ್ದರು.
ಇದನ್ನೂ ಓದಿ > > ಹಾಲ್ನೊರೆಯಂತೆ ದುಮ್ಮಿಕ್ಕುತ್ತಿರುವ ಬಾಳೆಬರೆ ಫಾಲ್ಸ್














