ಶಿವಮೊಗ್ಗ: ಪ್ರಯಾಣಿಕರ ಸುರಕ್ಷತೆ ಹಾಗೂ ನಗರದಲ್ಲಿ ಸುಗಮ ಸಾರಿಗೆ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಪೊಲೀಸ್ ಇಲಾಖೆ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ ವತಿಯಿಂದ ಜಂಟಿ ವಿಶೇಷ ತಪಾಸಣಾ ಕಾರ್ಯಾಚರಣೆ ನಡೆಸಿ 70 ಆಟೋ ರಿಕ್ಷಾಗಳನ್ನು ವಶಕ್ಕೆ ಪಡೆಯಲಾಯಿತು.
ಇದನ್ನೂ ಓದಿ > > ನದಿಗೆ ಹಾರಿ ತಾಯಿ-ಮಗಳು ಆತ್ಮಹತ್ಯೆಗೆ ಯತ್ನ, ರಕ್ಷಿಸಿದ ಯುವಕರು
ನಗರದ ಅಶೋಕ ಸರ್ಕಲ್, ಶಿವಪ್ಪನಾಯಕನ ಸರ್ಕಲ್ ಹಾಗೂ ರೈಲು ನಿಲ್ದಾಣದ ವ್ಯಾಪ್ತಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಚಾಲನಾ ಪರವಾನಗಿ, ವಿಮೆ, ಫಿಟ್ನೆಸ್ ಪ್ರಮಾಣಪತ್ರ, ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ಹಾಗೂ ಡಿಸ್ಪ್ಲೇ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಪರಿಶೀಲಿಸಲಾಯಿತು. ದಾಖಲೆಗಳು ಚಾಲ್ತಿಯಲ್ಲಿಲ್ಲದ ಹಾಗೂ ನಿಯಮ ಉಲ್ಲಂಘಿಸಿರುವ ಒಟ್ಟು 70 ಆಟೋ ರಿಕ್ಷಾಗಳನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ > > ಕೊಡಚಾದ್ರಿ ಬೆಟ್ಟದಲ್ಲಿ ದುರಂತ, 60 ಅಡಿ ಆಳದ ಕಂದಕಕ್ಕೆ ಬಿದ್ದ ಪ್ರವಾಸಿಗ!, ಆಗಿದ್ದೇನು?
ವಿಶೇಷವಾಗಿ ಫಿಟ್ನೆಸ್ ಪ್ರಮಾಣಪತ್ರದ ಅವಧಿ ಮುಕ್ತಾಯಗೊಂಡಿರುವ ಆಟೋ ರಿಕ್ಷಾಗಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.
ಮೀಟರ್ ದರಕ್ಕಿಂತ ಹೆಚ್ಚಿನ ಬಾಡಿಗೆ ಪಡೆಯದಂತೆ ಸೂಚನೆ
ಆಟೋ ರಿಕ್ಷಾಗಳಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ ಆಟೋ ಮೀಟರ್ ಬಳಸಿ, ಮೀಟರ್ನಲ್ಲಿ ನಮೂದಾಗುವ ನಿಗದಿತ ದರವನ್ನು ಮಾತ್ರ ಪ್ರಯಾಣಿಕರಿಂದ ಪಡೆಯಬೇಕು ಎಂದು ಅಧಿಕಾರಿಗಳು ಚಾಲಕರಿಗೆ ಸೂಚಿಸಿದ್ದಾರೆ. ನಿಗದಿತ ಮೀಟರ್ ದರಕ್ಕಿಂತ ಹೆಚ್ಚಿನ ಬಾಡಿಗೆ ಪಡೆಯದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಇದನ್ನೂ ಓದಿ > > ತ್ರಿವರ್ಣ ಬೆಳಕಿನಲ್ಲಿ ಕಂಗೊಳಿಸಿದ ಗಾಜನೂರಿನ ತುಂಗಾ ಜಲಾಶಯ
ಮುಂದಿನ ದಿನಗಳಲ್ಲಿಯೂ ನಗರದಲ್ಲಿ ಇಂತಹ ಕಾರ್ಯಾಚರಣೆಗಳನ್ನು ಮುಂದುವರಿಸಲಾಗುವುದು ಎಂದು ಪೊಲೀಸ್ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಯಾಣಿಕರ ಸುರಕ್ಷತೆ, ಪಾರದರ್ಶಕ ಬಾಡಿಗೆ ವ್ಯವಸ್ಥೆ ಹಾಗೂ ಸುಗಮ ಸಾರಿಗೆಯ ದೃಷ್ಟಿಯಿಂದ ಎಲ್ಲಾ ಆಟೋ ಚಾಲಕರು ತಮ್ಮ ವಾಹನಗಳಿಗೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಚಾಲ್ತಿಯಲ್ಲಿಟ್ಟುಕೊಂಡು ವಾಹನ ಚಲಾಯಿಸುವಂತೆ ಸೂಚಿಸಲಾಗಿದೆ. ಸಾರ್ವಜನಿಕರು ಹಾಗೂ ಆಟೋ ಚಾಲಕರು ಪೊಲೀಸ್ ಇಲಾಖೆ ಮತ್ತು ಪ್ರಾದೇಶಿಕ ಸಾರಿಗೆ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ.
ಇದನ್ನೂ ಓದಿ > > ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯ ಜೀವ ರಕ್ಷಿಸಿದ 112 ಸಿಬ್ಬಂದಿ!














