ಶಿವಮೊಗ್ಗ: ತಾಯಿ ಮತ್ತು ಮೂವರು ಮಕ್ಕಳು ರೈಲ್ವೆ ಸೇತುವೆಯಿಂದ ತುಂಗಾ ನದಿಗೆ ಜಿಗಿದ ಪ್ರಕರಣ ತಿರುವು ಪಡೆದುಕೊಂಡಿದ್ದು, ತಾಯಿ ಹೇಳಿಕೆ ಆಧಾರದಲ್ಲಿ ಪ್ರಕರಣ ದಾಖಲಾಗಿದೆ. ಇಬ್ಬರು ಮಕ್ಕಳು ಕಾಲು ಜಾರಿ ಸೇತುವೆಯಿಂದ ನದಿಗೆ ಬಿದ್ದಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಘಟನೆ ಸಂಬಂಧ ಭವಾನಿ ನೀಡಿದ ಹೇಳಿಕೆ ಆಧಾರದಲ್ಲಿ ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾನ್ವಿಕಾ ಮತ್ತು ತಾನ್ವಿಕಾ ರೈಲ್ವೆ ಸೇತುವೆ ಮೇಲಿನಿಂದ ಕಾಲು ಜಾರಿ ನದಿಗೆ ಬಿದ್ದಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಇದನ್ನೂ ಓದಿ > > ಶಿವಮೊಗ್ಗ | ರೈಲ್ವೆ ಹಳಿ ಮೇಲಿಂದ 3 ಮಕ್ಕಳೊಂದಿಗೆ ತುಂಗಾ ನದಿಗೆ ಹಾರಿದ ತಾಯಿ!
ಆ.24ರಂದು ಮಧ್ಯಾಹ್ನ ಮೂವರು ಮಕ್ಕಳೊಂದಿಗೆ ಚಿತ್ರದುರ್ಗದಿಂದ ಶಿವಮೊಗ್ಗಕ್ಕೆ ಬಂದಿದ್ದಾಗಿ ಭವಾನಿ ದೂರಿನಲ್ಲಿ ತಿಳಿಸಿದ್ದಾರೆ. ಮಕ್ಕಳನ್ನು ಲಯನ್ ಸಫಾರಿಗೆ ಕರೆದೊಯ್ಯಲು ಯೋಜಿಸಿದ್ದರು. ಆದರೆ ಊಟ ಮಾಡಿಸುವಷ್ಟರಲ್ಲಿ ಸಮಯ ಮೀರಿದ್ದರಿಂದ ಪುನಃ ಊರಿಗೆ ತೆರಳಲು ಹೊಳೆ ಬಸ್ ನಿಲ್ದಾಣದ ಬಳಿ ಬಸ್ಸಿಗಾಗಿ ಕಾಯುತ್ತಿದ್ದರು.
ಇದನ್ನೂ ಓದಿ > > ಸಾಗರ, ಕುತ್ತಿಗೆ ಭಾಗಕ್ಕೆ ಮಾರಕವಾಗಿ ಕೊಚ್ಚಿ ವ್ಯಕ್ತಿಯ ಕೊಲೆ!
ತುಂಗಾ ನದಿಯಲ್ಲಿ ನೀರನ್ನು ನೋಡುವ ಸಲುವಾಗಿ ಅರಕೇಶ್ವರ ದೇವಸ್ಥಾನದ ಕಡೆಯಿಂದ ರೈಲ್ವೆ ಸೇತುವೆ ಮೇಲೆ ನಡೆದು ಹೋಗಿದ್ದರು. ಸೇತುವೆ ಮೇಲಿಂದ ಸಾನ್ವಿಕಾ ಮತ್ತು ತಾನ್ವಿಕಾ ಕಾಲು ಜಾರಿ ನದಿಗೆ ಬಿದ್ದಿದ್ದಾರೆ. ಅವರನ್ನು ರಕ್ಷಿಸಲು 11 ತಿಂಗಳ ಮಗವಿನೊಂದಿಗೆ ತಾನು ನದಿಗೆ ಜಿಗಿದೆ ಎಂದು ಭವಾನಿ ದೂರಿನಲ್ಲಿ ತಿಳಿಸಿದ್ದಾರೆ. ನೀರಿನ ಸೆಳೆತ ಹೆಚ್ಚಿದ್ದರಿಂದ ಇಬ್ಬರು ಮಕ್ಕಳು ಕೊಚ್ಚಿ ಹೋಗಿದ್ದಾರೆ. ಸಾರ್ವಜನಿಕರು ತನ್ನನ್ನು ಮತ್ತು 11 ತಿಂಗಳ ಮಗು ನಿಶ್ಚಿತೇಜ್ನನ್ನು ರಕ್ಷಿಸಿದ್ದಾರೆ ಎಂದು ಭವಾನಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಹೇಳಿಕೆ ನೀಡಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಿಗದ ಮಕ್ಕಳ ಸುಳಿವು
ಸೇತುವೆ ಮೇಲಿಂದ ಬಿದ್ದಿದ್ದ ಸಾನ್ವಿಕಾ ಮತ್ತು ತನ್ವಿಕಾ ಅವರ ಸುಳಿವು ಇನ್ನೂ ಸಿಕ್ಕಿಲ್ಲ. ಘಟನೆ ನಡೆದ ದಿನದಿಂದ ಸತತ ಮೂರು ದಿನ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ರಬ್ಬರ್ ಬೋಟ್ ಬಳಸಿ ತುಂಗಾ ನದಿಯ ನೀರಿನ ಅಡಿ, ನದಿ ದಂಡೆ ಮೇಲೆ ಹುಡುಕಾಟ ಮಾಡಿದರು. ಆದರೆ ಈತನ ಮಕ್ಕಳ ಸುಳಿವು ಪತ್ತೆಯಾಗಿಲ್ಲ.
ತಾಯಿಯ ನೀಡಿರುವ ಹೇಳಿಕೆ ಆಧಾರದಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ > > ಶಿವಮೊಗ, 3ನೇ ದಿನಕ್ಕೆ ಕಾಲಿಟ್ಟ ಶೋಧ, ಪತ್ತೆಯಾಗದ ಇಬ್ಬರು ಮಕ್ಕಳ ಸುಳಿವು!














