ಶಿವಮೊಗ್ಗ : ಕಡಿಮೆ ಬೆಲೆಗೆ ಬಂಗಾರದ ನಾಣ್ಯಗಳನ್ನು ನೀಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ₹9.60 ಲಕ್ಷ ನಗದು ಪಡೆದು ನಕಲಿ ಬಂಗಾರದ ಆಭರಣಗಳನ್ನು ನೀಡಿ ವಂಚಿಸಿದ್ದ ಪ್ರಕರಣದಲ್ಲಿ ಪ್ರಮುಖ ಆರೋಪಿಯನ್ನು ಆನಂದಪುರ ಪೊಲೀಸರು ಬಂಧಿಸಿದ್ದು, ಆತನಿಂದ ₹7.10 ಲಕ್ಷ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ > > ಹಾಲ್ನೊರೆಯಂತೆ ದುಮ್ಮಿಕ್ಕುತ್ತಿರುವ ಬಾಳೆಬರೆ ಫಾಲ್ಸ್
ಪ್ರಕರಣದ ದೂರುದಾರರಾದ ಜಗದೀಶ್ ಅವರಿಗೆ ಆರೋಪಿ ಮಂಜು ಹಾಗೂ ಇತರ ಐವರು ತಮ್ಮ ಬಳಿ ಬಂಗಾರದ ನಾಣ್ಯಗಳಿದ್ದು, ಅವುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ನಂಬಿಸಿದ್ದರು. ಅದರಂತೆ 2026ರ ಜೂನ್ 4ರಂದು ಬೆಳಿಗ್ಗೆ ಸಾಗರ ತಾಲ್ಲೂಕಿನ ಜೋಗಿನಗದ್ದೆ ಗ್ರಾಮಕ್ಕೆ ಜಗದೀಶ್ ಅವರನ್ನು ಕರೆಸಿಕೊಂಡು ₹9.60 ಲಕ್ಷ ನಗದು ಪಡೆದು, ಬಳಿಕ ನಕಲಿ ಬಂಗಾರದ ಆಭರಣಗಳನ್ನು ನೀಡಿ ವಂಚನೆ ಎಸಗಿದ್ದರು.
ಇದನ್ನೂ ಓದಿ > > ರೂಪಕ್ಕಿಂತ ಗುಣವೇ ಆತ್ಮದ ಸ್ಪಂದನ : ಜಿ.ಎಸ್.ನಾರಾಯಣ ರಾವ್
ಈ ಸಂಬಂಧ ಆನಂದಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 97/2026ರಡಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 318(4) ಹಾಗೂ 190ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಠಾಣಾಧಿಕಾರಿ ಪ್ರವೀಣ್ ಎಸ್.ಪಿ. (ಪಿಎಸ್ಐ) ನೇತೃತ್ವದ ವಿಶೇಷ ಪೊಲೀಸ್ ತಂಡ ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸಿತ್ತು.
ಇದನ್ನೂ ಓದಿ > > ರಾಜ್ಯ ಸರ್ಕಾರದಿಂದ ನೇಮಕಾತಿ ಪರೀಕ್ಷೆಗಳಲ್ಲಿ ಸರಣಿ ಹಗರಣ!: ಡಾ. ಧನಂಜಯ ಸರ್ಜಿ ವಾಗ್ದಾಳಿ
ತನಿಖೆಯ ವೇಳೆ ಆಗಸ್ಟ್ 4, 2026ರಂದು ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಯಲ್ಲಾಪುರ ಗ್ರಾಮದ ನಿವಾಸಿ ಮಂಜುನಾಥ್ ವಿ. (30) ಎಂಬಾತನನ್ನು ಬಂಧಿಸಲಾಯಿತು. ಬಂಧಿತ ಆರೋಪಿಯಿಂದ ಪ್ರಕರಣಕ್ಕೆ ಸಂಬಂಧಿಸಿದ ₹7.10 ಲಕ್ಷ ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.














