ಶಿವಮೊಗ್ಗ: ಅಂಗವಿಕಲರ ವೇತನ ಕೊಡಿಸಲು ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಉಪತಹಸೀಲ್ದಾರ್ಗೆ ಶಿವಮೊಗ್ಗ ನ್ಯಾಯಾಲಯವು 4 ವರ್ಷ ಕಾರಾಗೃಹ ಶಿಕ್ಷೆ ಹಾಗೂ 40,000 ದಂಡ ವಿಧಿಸಿ ತೀರ್ಪು ನೀಡಿದೆ.
ಇದನ್ನೂ ಓದಿ > > ಜೆ.ಎನ್.ಎನ್.ಸಿ.ಇ ಕಾಲೇಜಿನಲ್ಲಿ ‘ಅಭಿವಿನ್ಯಾಸ’ ಕಾರ್ಯಕ್ರಮ, ವಿದ್ಯಾರ್ಥಿಗಳನ್ನು ಸ್ವಾಗತಿಸಿದ ರೋಬೋ!
10,000 ಲಂಚಕ್ಕೆ ಬೇಡಿಕೆ
ಭದ್ರಾವತಿ ತಾಲ್ಲೂಕಿನ ಡಿ.ಬಿ ಹಳ್ಳಿಯ ಗಿರೀಶ್ ಎಂಬುವವರ ತಂದೆ ಹುಟ್ಟು ಮೂಕರಾಗಿದ್ದಾರೆ. ಆದ್ದರಿಂದ ಅಂಗವಿಕಲರ ವೇತನ ಪಡೆಯಲು ಹೊಳೆಹೊನ್ನೂರು ಹೋಬಳಿಯ ಕಲ್ಲಿಹಾಳ್ ನಾಡಕಚೇರಿ ಉಪತಹಸೀಲ್ದಾರ್ ಪುಷ್ಪಲತಾ ಅವರನ್ನು ಭೇಟಿಯಾಗಿದ್ದರು. ಆಗ ಪುಷ್ಪಲತಾ ಪಿಂಚಣಿ ನೀಡಲು 10,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಗಿರೀಶ್ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ಇದನ್ನೂ ಓದಿ > > ಶಿವಮೊಗ್ಗ, ತೋಟದಲ್ಲಿ14.5 ಅಡಿ ಉದ್ದದ ಬೃಹತ್ ಹೆಬ್ಬಾವು ಪ್ರತ್ಯಕ್ಷ !
2017 ರ ಸೆಪ್ಟೆಂಬರ್ 21ರಂದು ಭದ್ರಾವತಿ ತಾಲ್ಲೂಕು ಕಛೇರಿಯಲ್ಲಿ 5000 ಲಂಚ ಸ್ವೀಕರಿಸುತ್ತಿದ್ದಾಗ ಉಪ ತಹಶೀಲ್ದಾರ್ ಪುಷ್ಪಲತಾ ಅವರು ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಈ ಸಂಬಂಧ ತನಿಖೆ ನಡೆಸಿದ ಇನ್ಸ್ಪೆಕ್ಟರ್ ಜೆ.ಎಸ್.ತಿಪ್ಪೇಸ್ವಾಮಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಶಿವಮೊಗ್ಗದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಆರೋಪ ಸಾಬೀತಾಗಿದೆ. ಈ ಹಿನ್ನೆಲೆ ನ್ಯಾಯಾಧೀಶರು ಉಪ ತಹಶೀಲ್ದಾರ್ ಪುಷ್ಪಲತಾಗೆ 4 ವರ್ಷ ಜೈಲು ಹಾಗೂ 40,000 ದಂಡ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಜಕ ಸುಂದರ್ ರಾಜ್ ವಾದ ಮಂಡಿಸಿದ್ದರು ಎಂದು ಲೋಕಾಯುಕ್ತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ > > ಬರ ಪೀಡಿತ ತಾಲೂಕುಗಳ ಪಟ್ಟಿ ಮತ್ತೊಮ್ಮೆ ಪರಿಶೀಲನೆ ಅಗತ್ಯ: ಸಿದ್ದಲಿಂಗಪ್ಪ ಎಂ.














